ಬಿಹಾರ: ರಾಜಾಗೀರ್ ಧರ್ಮಶಾಲೆಯಲ್ಲಿ ತುಮಕೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!!

ನಾಲಂದಾ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ನಡೆದಿದೆ.
ಮೃತರನ್ನು ತಾಯಿ ಜಿ.ಆರ್.ಸುಮಂಗಲಾ (78), ಮಗ ಜಿ.ಆರ್.ನಾಗಪ್ರಸಾದ್ (50) ಹಾಗೂ ಆಕೆಯ ಇಬ್ಬರು ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಜಿ.ಆರ್.ಶ್ರುತಾ (43) ಎಂದು ಗುರುತಿಸಲಾಗಿದೆ. ಸುಮಂಗಲಾ ರತ್ನಬಾಲ ರಾಜು ಎಂಬುವವರ ಪತ್ನಿ ಎಂದು ತಿಳಿದುಬಂದಿದೆ.
ರಾಜಗೀರ್ ಬೌದ್ಧ ಮತ್ತು ಜೈನರಿಗೆ ಅತ್ಯಂತ ಪವಿತ್ರವೆನಿಸಿದ ಯಾತ್ರಾ ಸ್ಥಳ. ಈ ನಾಲ್ವರೂ ನೇಪಾಳಕ್ಕೆ ಪ್ರವಾಸ ಹೋಗಿ ಜ.30ರಂದು ರಾಜಗೀರ್‌ಗೆ ಬಂದು ಕೊಠಡಿ ಬುಕ್ ಮಾಡಿದ್ದರು. ಮುಂದೆ ನಾಲಂದಾದ ಪಾವಾಪುರಿಗೆ ಹೋಗಲು ಯೋಜಿಸಿದ್ದರು. ಶುಕ್ರವಾರ ಬೆಳಿಗ್ಗೆ 9:40ರ ಸುಮಾರಿಗೆ ಕೊಠಡಿಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆ ಧರ್ಮಶಾಲೆಯ ಮ್ಯಾನೇಜರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನಾಲ್ಕೂ ಮಂದಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 3 ದಿನದಿಂದ ಕೊಠಡಿಯ ಬಾಗಿಲನ್ನೇ ತೆರೆದಿರಲಿಲ್ಲ ಎನ್ನಲಾಗಿದೆ. ಮೃತರಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ತುಮಕೂರು ಮೂಲದವರು ಎಂದು ತಿಳಿದುಬಂದಿದೆ.
ಮೃತರಿಗೆ ಸೇರಿದ ಮೊಬೈಲ್ ಪೋನ್‌ಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಹಲವು ದಾಖಲೆಗಳು, ₹1,18,000 ಹಣ ಹಾಗೂ ದೊಡ್ಡ ಪ್ರಮಾಣದ ನಿದ್ರೆ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.