ಬೀದರ್: ಸೇತುವೆಗೆ ಸ್ಕೂಟಿ ಡಿಕ್ಕಿ: ದಂಪತಿ, ಮಗಳು ಸ್ಥಳದಲ್ಲೇ ಸಾವು, ಮಗನಿಗೆ ಗಂಭೀರ ಗಾಯ..!!!
ಬೀದರ್: ರಸ್ತೆ ಬದಿಯ ಸೇತುವೆಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಗ ಗಂಭೀರ ಗಾಯಗೊಂಡ ದಾರುಣ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್(ಬಿ) ಪಟ್ಟಣದ ಬಳಿ ಭಾನುವಾರ ಸಂಜೆ ಸಂಭವಿಸಿದೆ.
ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ವೆಂಕಟ್ ರಾಮರಾವ (40), ಅವರ ಪತ್ನಿ ಶಿಲ್ಪಾ (35) ಹಾಗೂ ಮಗಳು ರಕ್ಷಿತಾ (11) ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಗ ರತ್ನಜೀತ (15) ನಿಗೆ ಗಂಭೀರ ಗಾಯಗಳಾಗಿವೆ. ಆತನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಟುಂಬ ಸಮೇತರಾಗಿ ಬೀದರ್ನಿಂದ ಸ್ವಗ್ರಾಮ ರಾಜೇಶ್ವರದ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಈ ಘಟನೆ ಜರುಗಿದೆ. ಮಾಹಿತಿ ತಿಳಿದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಳ್ಳಿಖೇಡ್(ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.