ಶಿವಮೊಗ್ಗ: ಬೆಂಕಿಯಲ್ಲಿ ಹೊತ್ತಿ ಉರಿದ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ ಪತ್ತೆ...
ಶಿವಮೊಗ್ಗ: ನಗರದ ಅಕ್ಷರ ಪಿಯುಸಿ ಕಾಲೇಜಿನ ಉಪನ್ಯಾಸಕ ಸುರೇಶ್ ಕುಮಾರ್(59) ಎಂಬವರ ಮೃತದೇಹ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಭದ್ರಾವತಿ ತಾಲೂಕಿನ ಹನುಮಂತಪುರ ಗ್ರಾಮದ ಅವರದ್ದೇ ಅಡಕೆ ತೋಟದಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.
ನಿನ್ನೆ ಬೆಳಗ್ಗೆ ಸುರೇಶ್ ಕುಮಾರ್ ಅವರು ಮದುವೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರು. ಇಂದು ಬೆಳಗ್ಗೆ ಅವರ ತೋಟದ ಹಳ್ಳದ ಪಕ್ಕದಲ್ಲಿ ಮೃತದೇಹ ಬೆಂಕಿಯಲ್ಲಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ದೇಹದ ಬಹುಭಾಗ ಸುಟ್ಟು ಹೋಗಿತ್ತು. ಮೃತದೇಹದ ಪಕ್ಕದಲ್ಲಿ ಅವರ ಬ್ಯಾಗ್ ಹಾಗೂ ಸ್ಕೂಟರ್ ಕಂಡುಬಂದಿದೆ. ಹೊಳೆಹೊನ್ನೂರು ಪೊಲೀಸರು ಹಾಗೂ ಸುಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಎಸ್ಪಿ ನಿಖಿಲ್ ಅವರು ಪ್ರತಿಕ್ರಿಯಿಸಿ, "ಹನುಮಂತಪುರ ಗ್ರಾಮದ ಸುರೇಶ್ ಕುಮಾರ್ ಎಂಬವರು ಶಿವಮೊಗ್ಗದ ಅಕ್ಷರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರ ದೇಹ ಸುಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಮ್ಮERSS 112 ವಾಹನ ಸ್ಥಳಕ್ಕೆ ಹೋದಾಗ ದೇಹ ಇನ್ನೂ ಬೆಂಕಿಯಲ್ಲಿ ಉರಿಯುತ್ತಿತ್ತು. ಸುತ್ತಮುತ್ತ ಇರುವ ತೆಂಗಿನ ಗರಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ಏನೂ ಕಂಡುಬಂದಿಲ್ಲ. ತನಿಖೆ ಪ್ರಾರಂಭಿಸಿದ್ದೇವೆ. ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ" ಎಂದು ತಿಳಿಸಿದರು.
"ಸದ್ಯಕ್ಕೆ ಅವರ ಮೊಬೈಲ್ ಫೋನ್ ಬಿಟ್ಟರೆ ಬೇರೇನೂ ದೊರೆತಿಲ್ಲ. ಅದನ್ನು ಲ್ಯಾಬ್ಗೆ ಕಳುಹಿಸಿಕೊಡಲಾಗಿದೆ. ಸುರೇಶ್ ಕುಮಾರ್ ನಿನ್ನೆ ಬೆಳಗ್ಗೆ 11 ಗಂಟೆಗೆ ಮದುವೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದರು. ಕುಟುಂಬದವರು ಇನ್ನೂ ಯಾರ ಮೇಲೂ ಇದುವರೆಗೂ ಆರೋಪ ಮಾಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾರಣ ತಿಳಿದು ಬರಲಿದೆ. ಸುರೇಶ್ ಕುಮಾರ್ ಶಿವಮೊಗ್ಗದಲ್ಲಿ ವಾಸವಾಗಿದ್ದು, ಅವರ ತೋಟ ಹನುಮಂತಪುರದಲ್ಲಿತ್ತು. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿಲ್ಲ" ಎಂದು ಹೇಳಿದರು.