ಬಂಟ್ವಾಳ :ನೇತ್ರಾವತಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ ; ಅಂಚೆ ಇಲಾಖೆ ವಿರುದ್ಧ ಬಂಟ್ವಾಳ ಠಾಣೆಗೆ ದೂರು..!!

ಬಂಟ್ವಾಳ :ನೇತ್ರಾವತಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ ; ಅಂಚೆ ಇಲಾಖೆ ವಿರುದ್ಧ ಬಂಟ್ವಾಳ ಠಾಣೆಗೆ ದೂರು..!!

ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ 10ನೇ ಮೈಲಿಕಲ್ಲು ಬಳಿ ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಅಂಚೆ ಇಲಾಖೆ ವಿರುದ್ಧ ಕಂದಾಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. 

ಪುದು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದವು. 2013ರಿಂದ 2023ರ ವರೆಗೆ ನೀಡಲಾಗಿದ್ದ ಆಧಾರ್ ಕಾರ್ಡ್‌ಗಳು ಈ ಸ್ಥಳದಲ್ಲಿ ರಾಶಿಯಾಗಿ ಬಿದ್ದಿರುವುದು ಸಾರ್ವಜನಿಕರ ಗಮನ ಸೆಳೆದಿತ್ತು. ಪತ್ತೆಯಾದ ಆಧಾರ್ ಕಾರ್ಡ್‌ಗಳಲ್ಲಿ ಫರಂಗಿಪೇಟೆ ಅಂಚೆ ಕಚೇರಿಯ ಸೀಲ್ ಇರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ. 

ಮಾರ್ಚ್ 5ರಂದು ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷಕರು ಹಾಗೂ ನಿರೀಕ್ಷಕರು ಪುದು ಗ್ರಾಮ ಪಂಚಾಯತ್ ಕಚೇರಿ ಮತ್ತು ಕಾರ್ಡ್‌ಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಅವರಿಗೆ ಕಾರ್ಡ್‌ಗಳು ಸಿಕ್ಕಿರಲಿಲ್ಲ. ನಂತರ ಪುದು ಗ್ರಾಮ ಪಂಚಾಯತ್ ಅಧಿಕಾರಿಗಳು ಸಾರ್ವಜನಿಕರಿಂದ ಪಡೆದಿದ್ದ ಕೆಲವು ಆಧಾರ್ ಕಾರ್ಡ್‌ಗಳನ್ನು ಅಂಚೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಪತ್ತೆಯಾದ ಆಧಾರ್ ಕಾರ್ಡ್‌ಗಳಲ್ಲಿ ಪುದು ಅಂಚೆ ಕಚೇರಿಯ ಸೀಲ್ ಇರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ವಿತರಣೆ ಮಾಡದೇ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಅಂಚೆ ಇಲಾಖೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Ads on article

Advertise in articles 1

advertising articles 2

Advertise under the article