ಮುಂಬೈ :ಮದುವೆಗೆ ಇನ್ನೂ ಕೆಲವೇ ತಿಂಗಳು ಬಾಕಿ… ಪ್ರೇಯಸಿಯ ಜನ್ಮದಿನ ಸಂಭ್ರಮಕ್ಕೆ ಹೋಗಿದ್ದ ಯುವಕ ದುರ್ಮರಣ...!!

ಮುಂಬೈ :ಮದುವೆಗೆ ಇನ್ನೂ ಕೆಲವೇ ತಿಂಗಳು ಬಾಕಿ… ಪ್ರೇಯಸಿಯ ಜನ್ಮದಿನ ಸಂಭ್ರಮಕ್ಕೆ ಹೋಗಿದ್ದ ಯುವಕ ದುರ್ಮರಣ...!!

ಮುಂಬೈ :ಮದುವೆಯ ಕನಸು ಕಟ್ಟಿಕೊಂಡಿದ್ದ 26 ವರ್ಷದ ಯುವಕನ ಬದುಕು ದುರಂತ ಅಂತ್ಯ ಕಂಡ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ನಿಶ್ಚಿತಾರ್ಥವಾಗಿದ್ದ ಯುವತಿಯ ಜನ್ಮದಿನ ಆಚರಿಸಲು ತೆರಳಿದ್ದ ಯುವಕ, ಫೋಟೋ ತೆಗೆಯುವ ವೇಳೆ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಮೃತನನ್ನು ಕೇತನ್ ವಿಶಾಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೇತನ್, ತನ್ನ ನಿಶ್ಚಿತ ವಧು ಹಾಗೂ ಇಬ್ಬರು ಸ್ನೇಹಿತರೊಂದಿಗೆ ಪುಣೆಯ ಪ್ರಸಿದ್ಧ ಲೋಹಗಡ್ ಕೋಟೆಗೆ ಭೇಟಿ ನೀಡಿದ್ದರು.

ಗುರುವಾರ ಬೆಳಗ್ಗೆ ಕೋಟೆ ಏರಿದ್ದ ತಂಡ, ಪ್ರಕೃತಿಯ ಸೊಬಗನ್ನು ಸವಿಯುತ್ತ ಫೋಟೋಗಳನ್ನು ಕ್ಲಿಕ್ಕಿಸುತ್ತಿತ್ತು. ಇದೇ ವೇಳೆ ಮಂಜು ಆವರಿಸಿದ್ದ ದೃಶ್ಯದ ನಡುವೆ ಫೋಟೋ ತೆಗೆಯಲು ಕೇತನ್ ಬಂಡೆಯ ಅಂಚಿನತ್ತ ತೆರಳಿದ್ದಾನೆ. ಬೆಳಗ್ಗೆ ಸುಮಾರು 10.30ರ ವೇಳೆಗೆ ಬೀಸುತ್ತಿದ್ದ ಭಾರೀ ಗಾಳಿಯಿಂದಾಗಿ ಆತನ ಸಮತೋಲನ ತಪ್ಪಿ ಕಂದಕಕ್ಕೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಶಿವದುರ್ಗ ಮಿತ್ರ ತುರ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿತು. ಕಠಿಣ ಭೂಪ್ರದೇಶ ಮತ್ತು ದಟ್ಟ ಸಸ್ಯಾವರಣದ ನಡುವೆಯೂ ಸುಮಾರು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಮೃತದೇಹವನ್ನು ಹೊರತೆಗೆದರು.

ಕೇತನ್ ಅವರ ವಿವಾಹ ಇದೇ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಿತ್ತು. ಮದುವೆಗಾಗಿ ರಾಜಸ್ಥಾನದ ಉದಯಪುರದಲ್ಲಿರುವ ಅರಮನೆಯನ್ನು ಕೂಡ ಕುಟುಂಬಸ್ಥರು ಮುಂಗಡ ಬುಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಸಂತಸದ ದಿನ, ಒಂದು ಸುಂದರ ನೆನಪು ಆಗಬೇಕಿದ್ದ ಪ್ರವಾಸ ಕ್ಷಣಾರ್ಧದಲ್ಲಿ ದುರಂತವಾಗಿ ಬದಲಾಗಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

Ads on article

Advertise in articles 1

advertising articles 2

Advertise under the article