ತಮಿಳುನಾಡು:ಹೆಂಡತಿ ಬಿಟ್ಟುಹೋದ ಆಘಾತ: ಕರೆಂಟ್ ಶಾಕ್ ನೀಡಿ ಮಕ್ಕಳಿಬ್ಬರನ್ನು ಕೊಂ*ದ ತಂದೆ ಆತ್ಮಹ*ತ್ಯೆ! Wife leave shocking children's Murder

ತಮಿಳುನಾಡು: ಪತ್ನಿ ತನ್ನನ್ನು ಬಿಟ್ಟು ಬೇರೊಬ್ಬನ ಜತೆ ಓಡಿಹೋದ ಹಿನ್ನೆಲೆಯಲ್ಲಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ, ತನ್ನ ಇಬ್ಬರು ಅಮಾಯಕ ಮಕ್ಕಳಿಗೆ ಕರೆಂಟ್ ಶಾಕ್ ನೀಡಿ ಹತ್ಯೆ ಮಾಡಿದ್ದಲ್ಲದೆ, ತಾನೂ ಅದೇ ರೀತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಟೂಟಿಕೋರಿನ್ ಜಿಲ್ಲೆಯ ಪುದುಕೊಟ್ಟೈ ಸಮೀಪದ ಸವೇರಿಯಾರ್‌ಪುರಂನಲ್ಲಿ ಈ ಘೋರ ದುರಂತ ಸಂಭವಿಸಿದೆ. ಲಾರಿ ಚಾಲಕನಾಗಿದ್ದ ಮೇರಿ ಮೈಕೆಲ್, ಆತನ ಪುತ್ರಿ 9ನೇ ತರಗತಿ ವಿದ್ಯಾರ್ಥಿನಿ ಮೇರಿ ನಿರೋಷಾ (14) ಹಾಗೂ 7ನೇ ತರಗತಿ ಓದುತ್ತಿದ್ದ ಪುತ್ರ ಮೇರಿ ಕೆನಿಸ್ಟನ್ (12) ಮೃತಪಟ್ಟ ದುರ್ದೈವಿಗಳು.
ಖಿನ್ನತೆಗೆ ಒಳಗಾಗಿದ್ದ ಮೈಕೆಲ್: ಮೈಕೆಲ್ ಅವರ ಪತ್ನಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ಗಂಡ ಮತ್ತು ಮಕ್ಕಳನ್ನು ತೊರೆದು ಪರಪುರುಷನ ಜತೆ ವಾಸಿಸಲು ಆರಂಭಿಸಿದ್ದಳು ಎನ್ನಲಾಗಿದೆ. ಪತ್ನಿಯ ಈ ನಡವಳಿಕೆಯಿಂದ ತೀವ್ರವಾಗಿ ನೊಂದಿದ್ದ ಮೈಕೆಲ್, ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಈ ಚಿಂತೆಯಲ್ಲೇ ಆತ ಕಳೆದ ಕೆಲವು ತಿಂಗಳುಗಳಿಂದ ಕೆಲಸಕ್ಕೂ ಹೋಗದೆ ಮನೆಯಲ್ಲೇ ಉಳಿದಿದ್ದನು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಶುಕ್ರವಾರ ರಾತ್ರಿ ಮಕ್ಕಳಿಗೆ ಊಟ ಮಾಡಿಸಿ ಮಲಗಿಸಿದ ಬಳಿಕ ಮೈಕೆಲ್ ಈ ವಿಪರೀತ ನಿರ್ಧಾರಕ್ಕೆ ಬಂದಿದ್ದಾನೆ. ನಿದ್ದೆಯಲ್ಲಿದ್ದ ಮಕ್ಕಳ ದೇಹಕ್ಕೆ ವಿದ್ಯುತ್ ತಂತಿಗಳನ್ನು ಸುತ್ತಿ ಕರೆಂಟ್ ಶಾಕ್ ನೀಡಿ ಕೊಂದಿದ್ದಾನೆ. ಮಕ್ಕಳು ಮೃತಪಟ್ಟ ಬಳಿಕ, ತಾನೂ ಅದೇ ತಂತಿಯಿಂದ ವಿದ್ಯುತ್ ಪ್ರವಹಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ.
ಮೈಕೆಲ್ ಅವರ 75 ವರ್ಷದ ವೃದ್ಧ ತಂದೆ ಆಂಥೋನಿ ಮುತ್ತು ಅವರು ಎಂದಿನಂತೆ ಶುಕ್ರವಾರ ರಾತ್ರಿ ಮನೆಯ ಹೊರಗಡೆ ಮಲಗಿದ್ದರು. ಶನಿವಾರ ಮಧ್ಯಾಹ್ನವಾದರೂ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಅವರು, ತಕ್ಷಣವೇ ನೆರೆಹೊರೆಯವರ ಗಮನಕ್ಕೆ ತಂದಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪುದುಕೊಟ್ಟೈ ಪೊಲೀಸರು ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಈ ವೇಳೆ ಹಾಸಿಗೆಯ ಮೇಲೆ ಮೂವರ ಮೃತದೇಹಗಳು ವಿದ್ಯುತ್ ತಂತಿ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟೂಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.