ರಿಷಿ ಪ್ರತಿಷ್ಠಾನದ ಮತ್ತು ರಿಷಿ ಕಲಾ ಕೇಂದ್ರದ ವತಿಯಿಂದ ಆಟಿದ ನೆಂಪು-2026
Monday, August 17, 2026
ಮಂಗಳೂರು: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ ಹಾಗೂ ರಿಷಿ ಕಲಾ ಕೇಂದ್ರ, ಮಂಗಳೂರು ವತಿಯಿಂದ ಆಯೋಜಿಸಲಾದ ‘ಆಟಿದ ನೆಂಪು-2026’ ಕಾರ್ಯಕ್ರಮ ನಗರದ ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ವಿನೋದ್ ಪುದು, ಇಂದಿನ ಯುವ ಪೀಳಿಗೆ ಜಂಕ್ ಫುಡ್ ಹಾಗೂ ಹೊರಗಿನ ಆಹಾರ ಸಂಸ್ಕೃತಿಗೆ ಮಾರುಹೋಗುತ್ತಿರುವ ಸಂದರ್ಭದಲ್ಲಿ ಹಿರಿಯರ ಪೌಷ್ಟಿಕ ಆಹಾರ ಪದ್ಧತಿ ಮತ್ತು ತುಳು ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವುದು ಅಗತ್ಯ. ತಾಯಂದಿರು ಪ್ರೀತಿಯಿಂದ ತಯಾರಿಸುತ್ತಿದ್ದ ಆಟಿಯ ತಿನಿಸುಗಳು ಹಾಗೂ ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದ ಬಾಂಧವ್ಯ, ಪ್ರೀತಿ ಮತ್ತು ಸೌಹಾರ್ದತೆ ಮುಂದುವರಿಯಬೇಕು. ಇಂತಹ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ಶ್ಲಾಘನೀಯ ಎಂದರು.
ಹಿರಿಯ ಟಿವಿ ನಿರೂಪಕಿ ಮಾನಸ ಪುದುವೆಟ್ಟು ಮಾತನಾಡಿ, ‘ಆಟಿದ ನೆಂಪು’ಯಂತಹ ಕಾರ್ಯಕ್ರಮಗಳ ಮೂಲಕ ಹಿಂದಿನ ಜೀವನಶೈಲಿಯನ್ನು ಯುವ ಪೀಳಿಗೆಗೆ ಪರಿಚಯಿಸಬಹುದು. ಆಟಿ ಅನಿಷ್ಟದ ತಿಂಗಳಲ್ಲ ಎಂದು ಪ್ರಕೃತಿಯನ್ನು ನಂಬಿ ಧೈರ್ಯದಿಂದ ಎದುರಿಸುವ ಜೀವನ ಕಲೆಯನ್ನು ಹಿರಿಯರು ಕಲಿಸಿಕೊಟ್ಟಿದ್ದರು. ಮುಂದಿನ ಕಷ್ಟದ ದಿನಗಳಿಗಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡಲು ‘ಪತ್ತನಾಜೆ’ಯ ಗಡುವು ವಿಧಿಸಿದ್ದ ಹಿರಿಯರ ದೂರದೃಷ್ಟಿ ವಿಚಾರವಾಗಿದೆ ಎಂದು ಕರೆ ನೀಡಿದರು.
ರಿಷಿ ಕಲಾ ಕೇಂದ್ರದ ಅಧ್ಯಕ್ಷೆ ವಸುಧಾ ಯು. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞೆ ಗಿರಿಜಾತೆ ಆರ್. ಭಂಡಾರಿ, ಯಕ್ಷಗಾನ ಗುರು ವಿಶ್ವನಾಥ ಪದ್ಮುಂಜ, ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಾಮ ಶೆಟ್ಟಿಗಾರ್ ಹಾಗೂ ಹಿರಿಯ ಸದಸ್ಯೆ ವನಿತಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಬೇಸಾಯಗಾರ್ತಿ ಸುಶೀಲ ಗಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಸಂಸ್ಥಾಪಕ ದಿವಾಕರ್ ಪದ್ಮುಂಜ, ಅಧ್ಯಕ್ಷೆ ಕೀರ್ತನ ಕುಲಾಲ್, ಪತ್ರಕರ್ತರಾದ ಉಮೇಶ್ ಶೆಟ್ಟಿ, ಸುಧಾಕರ್, ಕಲಾ ಕೇಂದ್ರದ ಸದಸ್ಯರಾದ ಶುಭಲಕ್ಷ್ಮಿ, ಚಿತ್ರ, ಸಂಗೀತ, ಸುವರ್ಣ, ಸುಜಾತ ಉಪಸ್ಥಿತರಿದ್ದರು.
ರಿಷಿ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲಾ ಕೇಂದ್ರದ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಆಟಿ ತಿಂಗಳ ಖಾದ್ಯಗಳನ್ನು ಅತಿಥಿಗಳು ಹಾಗೂ ಸಾರ್ವಜನಿಕರಿಗೆ ಉಣಬಡಿಸಿದರು.
ವಂದಿತಾ ಯು. ಶೆಟ್ಟಿ ಸ್ವಾಗತಿಸಿದರು. ನಯನ ವಂದಿಸಿದರು. ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶ್ರೀ ಎ.ಎಸ್. ಪ್ರಾರ್ಥಿಸಿದರು.