ಬೆಂಗಳೂರು: ಗುಟ್ಕಾ, ಪಾನ್ ಮಸಾಲಾ ನಿಷೇಧ ಹಿಂಪಡೆದ ಸರ್ಕಾರ! ಕಾರಣ ಏನು?gutka panmasala ban inhibition vapas

ಬೆಂಗಳೂರು: ಕೇವಲ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಜಾರಿಯಾದ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಬ್ಯಾನ್ ಇದೀಗ ರದ್ದಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದೇಶ ವಾಪಾಸ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿತ್ತು. ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿದ್ದರು. ಇದೀಗ ಡಿಕೆ ಶಿವಕುಮಾರ್ ಇದನ್ನು ರದ್ದು ಮಾಡಲು ಸೂಚನೆ ನೀಡಿದ್ದಾರೆ.
ತನಗೆ ಮಾಹಿತಿ ನೀಡದೆ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಹಲವಾರು ರೈತರು ನಷ್ಟ ಅನುಭವಿಸಲಿದ್ದಾರೆ ಎಂದು ಸಿಎಂ ಗರಂ ಆಗಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಿಯೋಗವೊಂದು ಸಿಎಂ ಬಳಿ ತೆರಳಿ ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದರು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಶಾಸಕ ಡಿಜಿ ಶಾಂತನೇಗೌಡ ನೇತೃತ್ವದ ನಿಯೋಗವು ಈ ಮನವಿ ಮಾಡಿತ್ತು.
ರಾಜ್ಯ ಸರ್ಕಾರದ ಆದೇಶದಿಂದ ರೈತರು ಗಾಬರಿಯಾಗಿದ್ದಾರೆ. ಮಾರುಕಟ್ಟೆ ಮೇಲೆ ಇದು ಪರಿಣಾಮ ಬೀಳಲಿದ್ದು, ಅಡಕೆ ಬೆಳೆಗಾರರಿಗೆ ಸರ್ಕಾರ ರಕ್ಷಣೆ ಕೊಡಬೇಕು ಎಂದು ನಿಯೋಗ ಮನವಿ ಮಾಡಿತ್ತು