ಮಂಗಳೂರು: ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣ; ಐವರು ವಿದ್ಯಾರ್ಥಿಗಳ ಬಂಧನ..

ಮಂಗಳೂರು: ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣ; ಐವರು ವಿದ್ಯಾರ್ಥಿಗಳ ಬಂಧನ..


Ragging in Mangaluru private college

ಮಂಗಳೂರು: ನಗರದ ಗುಜ್ಜರಕೆರೆಯ ಚಹಾ ಅಂಗಡಿ ಬಳಿ ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ನಡೆಸಿದ ರ‌್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬುಧವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಇದು ಹಿರಿಯ ವಿದ್ಯಾರ್ಥಿಗಳು ಜೂನಿಯರ್‌ಗಳ ಮೇಲೆ ನಡೆಸಿದ್ದು ರ‌್ಯಾಗಿಂಗ್‌ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ರ‌್ಯಾಗಿಂಗ್ ನಿರೋಧಕ ಕಾಯ್ದೆಯ ಕಲಂಗಳನ್ನು ಸೇರ್ಪಡೆಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಕಮೀಷನರ್ ತಿಳಿಸಿದ್ದಾರೆ.

ಶೂ ಧರಿಸಬಾರದೆಂದು ಹಲ್ಲೆ – ಹೊರಬಂತು ರ‌್ಯಾಗಿಂಗ್ ಅಸಲಿಯತ್ತು! ಲಾಜಿಸ್ಟಿಕ್ಸ್ ಡಿಪ್ಲೊಮಾ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಗುಂಪು, ಪ್ರಥಮ ವರ್ಷದ ಬಿಬಿಎ ಹಾಗೂ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವಿಭಾಗದ ಇಬ್ಬರು ವಿದ್ಯಾರ್ಥಿಗಳಿಗೆ "ನೀವು ಶೂ ಧರಿಸಬಾರದು" ಎಂದು ವಿನಾಕಾರಣ ಡ್ರೆಸ್ ಕೋಡ್ ಹೇರಲು ಯತ್ನಿಸಿದೆ. ಜೂನಿಯರ್‌ಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಸೀನಿಯರ್ಸ್ ಕಡೆಯಿಂದ ತೀವ್ರ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಸಂತ್ರಸ್ತ ವಿದ್ಯಾರ್ಥಿಗಳು ಹಾಗೂ ಹಲ್ಲೆ ನಡೆಸಿದ ಆರೋಪಿಗಳು ಕೇರಳ ಮೂಲದವರು ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ತಮ್ಮೊಂದಿಗೆ ಐವರು ಮಾತ್ರವೇ ಇದ್ದೆವು ಎಂದು ಹೇಳಿಕೊಂಡಿದ್ದರೂ, ಹಲ್ಲೆಗೊಳಗಾದ ವಿದ್ಯಾರ್ಥಿಗಳು ಆರು ಜನರಿದ್ದರು ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಸಂತ್ರಸ್ತರು ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಿ, ಆರನೇ ಆರೋಪಿಯ ದೃಢೀಕರಣ ಮಾಡಲಾಗುವುದು. ಪ್ರಸ್ತುತ ಬಂಧಿತ ಐವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತಿದೆ ಎಂದು ಕಮೀಷನರ್ ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಆರಂಭದಲ್ಲಿ ಗಾಯಗಳಿದ್ದ ಕಾರಣಕ್ಕೆ ಕೇವಲ ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ, ತನಿಖೆಯ ವೇಳೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಡ್ರೆಸ್ ಕೋಡ್ ಹೇರಿ ರಾಗಿಂಗ್  ನಡೆಸಿರುವುದು ಸ್ಪಷ್ಟವಾಗಿದೆ. ಹೀಗಾಗಿ, ತನಿಖಾಧಿಕಾರಿಗೆ ಪ್ರಕರಣದಲ್ಲಿ ರ‍್ಯಾಗಿಂಗ್ ನಿರೋಧಕ ಕಾಯ್ದೆಯ (Ragging Sections) ಸೂಕ್ತ ಕಲಂಗಳನ್ನು ಸೇರ್ಪಡೆಗೊಳಿಸಿ, ಬಂಧಿತರನ್ನು ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲು ಸೂಚಿಸಲಾಗಿದೆ," ಎಂದು ಹೇಳಿದ್ದಾರೆ

Ads on article

Advertise in articles 1

advertising articles 2

Advertise under the article