ಮಂಗಳೂರು: ಮಳೆ ರಜೆಯ ಮಜಾ ಮುಗೀತು- ದ.ಕ.ಜಿಲ್ಲೆಯ ವಿದ್ಯಾರ್ಥಿಗಳಿಗೆ ‘ಶನಿವಾರ’ ಪೂರ್ಣದಿನದ ಶಾಲೆಯ ಶಾಕ್!
Friday, August 21, 2026
ಮಂಗಳೂರು: ಭಾರಿ ಮಳೆಯಿಂದಾಗಿ ಸಿಕ್ಕಿದ್ದ ಹೆಚ್ಚುವರಿ ರಜೆಯ ಖುಷಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳಿಗೆ ಇದೀಗ ಹೆಚ್ಚುವರಿ ತರಗತಿಗಳ ಸರದಿ ಎದುರಾಗಿದೆ. ಮಳೆ ಕಾರಣದಿಂದ ಕಳೆದುಕೊಂಡಿರುವ ಬೋಧನಾ ದಿನಗಳನ್ನು ಸರಿದೂಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊಸ ವೇಳಾಪಟ್ಟಿ ರೂಪಿಸುವಂತೆ ಸೂಚಿಸಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರತೆ ಹೆಚ್ಚಾದ ಸಂದರ್ಭ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಹಲವು ಹಂತಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿತ್ತು. ಇದರಿಂದ ನಿಗದಿತ ಶೈಕ್ಷಣಿಕ ಅವಧಿಯಲ್ಲಿ ಕೆಲವು ದಿನಗಳ ಬೋಧನೆ ಕಡಿತಗೊಂಡಿದ್ದು, ಪಠ್ಯಕ್ರಮ ಪೂರ್ಣಗೊಳಿಸುವಲ್ಲಿ ವ್ಯತ್ಯಯ ಉಂಟಾಗಿದೆ.
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಹಾಗೂ ಮೂಡುಬಿದಿರೆ ವಲಯಗಳಲ್ಲಿ ಒಟ್ಟು 8 ಪೂರ್ಣ ದಿನ ಮತ್ತು ಒಂದು ಅರ್ಧ ದಿನ ಶಾಲಾ ಕಲಾಪ ನಡೆದಿಲ್ಲ. ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ವಲಯಗಳಲ್ಲಿ 9 ಪೂರ್ಣ ದಿನಗಳ ಶಾಲಾ ಕಲಾಪಕ್ಕೆ ರಜೆ ಕಾರಣವಾಗಿದೆ.
ಹೀಗಾಗಿ ಆಗಸ್ಟ್ ಮೂರನೇ ವಾರದಿಂದಲೇ ನಷ್ಟವಾದ ಬೋಧನಾ ಅವಧಿಯನ್ನು ಭರ್ತಿ ಮಾಡಲು ಹೆಚ್ಚುವರಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
ಇನ್ನು ಮುಂದೆ ಶನಿವಾರದಂದು ಅಪರಾಹ್ನವೂ ತರಗತಿಗಳನ್ನು ನಡೆಸಿ ಪೂರ್ಣಾವಧಿ ಶಾಲೆ ನಡೆಸಬೇಕಾಗುತ್ತದೆ. ಅಲ್ಲದೆ, ವಾರದ ಇತರ ದಿನಗಳಲ್ಲಿ ಸಂಜೆ ವೇಳೆಯಲ್ಲಿ ಹೆಚ್ಚುವರಿ ಬೋಧನಾ ಅವಧಿ ನಡೆಸುವಂತೆ ಸೂಚಿಸಲಾಗಿದೆ.
ಆದರೆ ಎಲ್ಲ ಶಾಲೆಗಳಿಗೂ ಒಂದೇ ರೀತಿಯ ವೇಳಾಪಟ್ಟಿ ಅನ್ವಯವಾಗುವುದಿಲ್ಲ. ಪ್ರತಿ ಶಾಲೆಯು ತಮಗೆ ದೊರೆತ ಮಳೆ ರಜೆಯ ದಿನಗಳನ್ನು ಲೆಕ್ಕ ಹಾಕಿ, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಸದಸ್ಯರೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಸೂಕ್ತ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು.
ಈ ಸಂಬಂಧ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಡಿಡಿಪಿಐ ಕಚೇರಿಯಿಂದ ಜ್ಞಾಪನಾ ಪತ್ರದ ಮೂಲಕ ತುರ್ತು ನಿರ್ದೇಶನ ನೀಡಲಾಗಿದೆ. ನಷ್ಟವಾಗಿರುವ ಬೋಧನಾ ದಿನಗಳನ್ನು ಶೈಕ್ಷಣಿಕ ವರ್ಷದೊಳಗೆ ಸಮರ್ಪಕವಾಗಿ ಸರಿದೂಗಿಸಿ, ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.