ಮಂಗಳೂರು :ಡ್ರಗ್ಸ್ ವಿರುದ್ಧ ಖಾಕಿ ಸಮರ ;ಅರ್ಕುಳದಲ್ಲಿ 1.35 ಲಕ್ಷ ಮೌಲ್ಯದ MDMA ಸಹಿತ ಪೆಡ್ಲರ್ ಸೆರೆ..

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಹಾವಳಿ ಹಾಗೂ ಮಾರಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕಂಕನಾಡಿ ನಗರ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ದಾಳಿಗಳನ್ನು ನಡೆಸಿ ನಿಷೇಧಿತ ಎಂಡಿಎಂಎ (MDMA) ಮಾರಾಟಗಾರನೊಬ್ಬನನ್ನು ಬಂಧಿಸಿರುವ ಜೊತೆಗೆ, ಮಾದಕ ದ್ರವ್ಯ ಸೇವಿಸಿದ್ದ ನಾಲ್ವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.
ಪ್ರಕರಣ 1: ಅರ್ಕುಳದಲ್ಲಿ ಕಾರ್ಯಾಚರಣೆ – ರೂ 1.15 ಲಕ್ಷ ಮೌಲ್ಯದ MDMA ವಶ (ಕಂಕನಾಡಿ ನಗರ ಠಾಣೆ) ಬಂಟ್ವಾಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-73ರ ಅರ್ಕುಳ ಜಂಕ್ಷನ್ ಬಳಿಯ ಯಶಸ್ವಿ ಹಾಲ್ ಎದುರು ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ವ್ಯಕ್ತಿಯೊಬ್ಬ ಹೊಂಚು ಹಾಕುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಮಾಹಿತಿಯ ಮೇರೆಗೆ ಕಂಕನಾಡಿ ನಗರ ಠಾಣಾ ಪಿಎಸ್‌ಐ ಶರಣಪ್ಪ ಭಂಡಾರಿ ಮತ್ತು ಸಿಬ್ಬಂದಿ ಪಂಚರ ಸಮಕ್ಷಮ ಸೆಪ್ಟೆಂಬರ್ 23ರ ಸಂಜೆ 6:10ರ ಸುಮಾರಿಗೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಸುಭಾಶ್ ಎಂಬಾತನನ್ನು ಪೊಲೀಸರು ಸುತ್ತುವರಿದು ಹಿಡಿದಿದ್ದಾರೆ
ವಶಪಡಿಸಿಕೊಂಡ ಸೊತ್ತುಗಳು: ಆರೋಪಿಯ ಬಳಿಯಿದ್ದ ಕಪ್ಪು ಬಣ್ಣದ ಬ್ಯಾಗ್ ತಪಾಸಣೆ ನಡೆಸಿದಾಗ ರೂ 1,15,000 ಮೌಲ್ಯದ 23.20 ಗ್ರಾಂ MDMA, ಒಂದು ಡಿಜಿಟಲ್ ತೂಕ ಮಾಪನ (ವೇಯಿಂಗ್ ಸ್ಕೇಲ್), ಡ್ರಗ್ಸ್ ಪ್ಯಾಕಿಂಗ್‌ಗೆ ಬಳಸುತ್ತಿದ್ದ 6 ಜಿಪ್‌ಲಾಕ್ ಪ್ಲಾಸ್ಟಿಕ್ ಕವರ್‌ಗಳು ಹಾಗೂ 2 ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಇವುಗಳನ್ನು ಜಪ್ತಿ ಮಾಡಲಾಗಿದೆ.
ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ಸುಮಾರು ರೂ 1,35,000 ಎಂದು ಅಂದಾಜಿಸಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ 2: ಬೆಳ್ಮ ಗ್ರೀನ್ ಗ್ರೌಂಡ್ ಬಳಿ ಡ್ರಗ್ಸ್ ಸೇವಿಸಿದ್ದ ಯುವಕನ ಸೆರೆ (ಕೊಣಾಜೆ ಠಾಣೆ)
ಸೆಪ್ಟೆಂಬರ್ 24ರಂದು ಬೆಳಗ್ಗೆ 11:45ರ ವೇಳೆಗೆ ಕೊಣಾಜೆ ಠಾಣಾ ಪಿಎಸ್‌ಐ ನಾಗರಾಜ್ ಎಸ್. ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ಗ್ರೀನ್ ಗ್ರೌಂಡ್ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆತ ಪುದು ಗ್ರಾಮದ ಕುಂಪಲ ಮಜಲು ಮೂಲದವನಾಗಿದ್ದು, ಪ್ರಸ್ತುತ ಕುದ್ರೋಳಿ ರಹಮ್ಮತ್ ನಗರ ನಿವಾಸಿ ಮೊಹಮ್ಮದ್ ಅಫೀಜ್ (26) ಎಂದು ತಿಳಿದುಬಂದಿದೆ. ಕಣಚೂರು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತ ಆಂಫೆಟಮೈನ್ (AMP), ಗಾಂಜಾ (THC) ಹಾಗೂ ಮೆಥಾಂಫೆಟಮೈನ್ (MET) ಸೇವಿಸಿರುವುದು ಧೃಢಪಟ್ಟಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣ 3: ಪಿಜ್ಜಾ ಗ್ರೌಂಡ್ ಬಳಿ ಮತ್ತಿನಲ್ಲಿದ್ದ ಇಬ್ಬರು ಯುವಕರು ಪೊಲೀಸ್ ಬಲೆಗೆ (ಕೊಣಾಜೆ ಠಾಣೆ)
ಸೆಪ್ಟೆಂಬರ್ 24ರ ಮಧ್ಯಾಹ್ನ 1:30ಕ್ಕೆ ಕೊಣಾಜೆ ಪಿಎಸ್‌ಐ ಪುನೀತ್ ಗಾಂವ್ಕರ್ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಬೆಳ್ಮ ಗ್ರಾಮದ ಪಿಜ್ಜಾ ಗ್ರೌಂಡ್ ಬಳಿ ನಶೆಯಲ್ಲಿದ್ದ ಇಬ್ಬರು ಯುವಕರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಅವರು ಬಜಾಲ್ ನಿವಾಸಿ ಮೊಹಮ್ಮದ್ ಮುಸ್ತಾಫ (24) ಹಾಗೂ ಕಣ್ಣೂರು ವೀರನಗರ ನಿವಾಸಿ ಅಬ್ದುಲ್ ಶಾಖೀರ್ (24) ಎಂದು ಗುರುತಿಸಲಾಗಿದೆ. ಕಣಚೂರು ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆಯಲ್ಲಿ ಇವರಿಬ್ಬರೂ ಆಂಫೆಟಮೈನ್ (AMP) ಹಾಗೂ ಮೆಥಾಂಫೆಟಮೈನ್ (MET) ಮಾದಕ ವಸ್ತುಗಳನ್ನು ಸೇವಿಸಿರುವುದು ಸಾಬೀತಾಗಿದೆ.
ಪ್ರಕರಣ 4: ಸಂಜೆ ಮತ್ತೆ ಕಾರ್ಯಾಚರಣೆ – ಗ್ರೀನ್ ಗ್ರೌಂಡ್ ಬಳಿ ಮತ್ತೋರ್ವನ ಬಂಧನ (ಕೊಣಾಜೆ ಠಾಣೆ)
ಅದೇ ದಿನ (ಸೆ. 24) ಸಂಜೆ 6:15ರ ಸುಮಾರಿಗೆ ಬೆಳ್ಮ ಗ್ರಾಮದ ಗ್ರೀನ್ ಗ್ರೌಂಡ್ ಬಳಿ ಪಿಎಸ್‌ಐ ನಾಗರಾಜ್ ಎಸ್. ಮತ್ತು ಸಿಬ್ಬಂದಿ ಗಸ್ತು ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಮತ್ತಿನಲ್ಲಿ ನಿಂತಿದ್ದ ಮಂಗಳೂರಿನ ಎಮ್ಮೆಕೆರೆ ನಿವಾಸಿ ಮೊಹಮ್ಮದ್ ಆಸಿಫ್ (26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಕೂಡ ಆಂಫೆಟಮೈನ್ (AMP) ಮತ್ತು ಮೆಥಾಂಫೆಟಮೈನ್ (MET) ಸೇವಿಸಿರುವುದು ದೃಢಪಟ್ಟಿದೆ.
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿದ ನಾಲ್ವರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆಯನ್ವಯ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.