ಬೆಂಗಳೂರು :ಹಣಕ್ಕಾಗಿ ನೆರೆಮನೆಯ ಬಾಲಕನನ್ನು ಅಪಹರಿಸಿ ಕಲ್ಲಿನಿಂದ ಜಜ್ಜಿ ಕೊಂದ ಪಾತಕಿ : ಕಾರು ಅಪಘಾತವಾದಾಗ ಬಯಲಾಯಿತು ಕೊಲೆಯ ರಹಸ್ಯ..

ಬೆಂಗಳೂರು :ಹಣಕ್ಕಾಗಿ ನೆರೆಮನೆಯ ಬಾಲಕನನ್ನು ಅಪಹರಿಸಿ ಕಲ್ಲಿನಿಂದ ಜಜ್ಜಿ ಕೊಂದ ಪಾತಕಿ : ಕಾರು ಅಪಘಾತವಾದಾಗ ಬಯಲಾಯಿತು ಕೊಲೆಯ ರಹಸ್ಯ..

ಬೆಂಗಳೂರು :ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಯುವ ಉದ್ದೇಶದಿಂದ ಎಂಟೆಕ್‌ ಪದವೀಧರನೊಬ್ಬ ನೆರೆಮನೆಯ 13 ವರ್ಷದ ಬಾಲಕನನ್ನು ಅಪಹರಿಸಿ ಬರ್ಬರವಾಗಿ ಸಾಯಿಸಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬಾಲಕನ ಮೃತದೇಹವನ್ನು ಕಾರಿನಲ್ಲಿಟ್ಟು ಸಾಗಿಸುತ್ತಿರುವಾ ಈ ಕಾರು ಅಪಘಾತಕ್ಕೀಡಾದ ಪರಿಣಾಮ ಆರೋಪಿ ಮತ್ತು ಅವನ ಸಹಚರ ಸಿಕ್ಕಿಬಿದ್ದಿದ್ದಾರೆ.

ಘಟನೆ ವಿವರ 

ಯಲಹಂಕದ ವಿನಾಯಕ ಲೇಔಟ್‌ನ ವಾಲಾ ಭಾಸ್ಕರ್‌ ರೆಡ್ಡಿ (26) ಆರೋಪಿ. ಈತ ತನ್ನ ಸಹಚರ ಏಡುಕೊಂಡಲು ಜೊತೆ ಸೇರಿ ಸೆ.13ರಂದು ರಾತ್ರಿ ಬಾಲಕ ಪ್ರಜ್ವಲ್‌ನನ್ನು ಪಟಾಕಿ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಅಪಹರಿಸಿ ಬಾಗಲೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆ ಮೇಲೆ ಹಾಲೋಬ್ರಿಕ್ಸ್‌ ಎತ್ತಿ ಹಾಕಿ ಕೊಲೆ ಮಾಡಿದ್ದ.

ಪ್ರಜ್ವಲ್‌ನ ಪೋಷಕರಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಬಾಲಕನನ್ನು ಅಪಹರಿಸಿ ಕೊಂದಿದ್ದಾರೆ. ಕೊಲೆಗೂ ಮುನ್ನ ಪ್ರಜ್ವಲ್‌ ತನ್ನ ಪೋಷಕರಿಗೆ ಹಣ ಕೊಡುವಂತೆ ಮನವಿ ಮಾಡುವ ವಿಡಿಯೋ ಮಾಡಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಂಡನ್‌ನಲ್ಲಿ ಎಂಟೆಕ್‌ ಓದಿದ್ದ ಭಾಸ್ಕರ್‌ ರೆಡ್ಡಿ, ಐದು ತಿಂಗಳ ಹಿಂದೆ ಬೆಂಗಳೂರಿಗೆ ಮರಳಿ ಪೋಷಕರೊಂದಿಗೆ ವಿನಾಯಕ ನಗರದಲ್ಲಿ ನೆಲೆಸಿದ್ದ. ವೈಟ್‌ಫೀಲ್ಡ್‌ನ ಪ್ರತಿಷ್ಠಿತ ಕಂಪೆನಿಯಲ್ಲಿ ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ಈತನ ಮನೆಯ ಪಕ್ಕದಲ್ಲೇ ರಿಯಲ್ ಎಸ್ಟೇಟ್‌ ಉದ್ಯಮಿ ಮನೋಹರ್‌, ಪುತ್ರ ಪ್ರಜ್ವಲ್‌ ಸೇರಿದಂತೆ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಾಸವಿದ್ದರು.

9ನೇ ತರಗತಿ ಓದುತ್ತಿದ್ದ ಪ್ರಜ್ವಲ್‌ಗೆ ಕಾರುಗಳ ಬಗ್ಗೆ ವಿಪರೀತ ಆಸಕ್ತಿಯಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಭಾಸ್ಕರ್‌, ಕಾರು ಚಾಲನೆಗೆ ಪ್ರಜ್ವಲ್‌ನನ್ನು ಕರೆದೊಯ್ದು ವಿಶ್ವಾಸ ಗಳಿಸಿ ಬಾಲಕನ ಕುಟುಂಬಕ್ಕೆ ಹತ್ತಿರವಾಗಿದ್ದ.

ವಿನಾಯಕ ನಗರದಲ್ಲಿ ಗಣೇಶೋತ್ಸವದ ಕಾರಣಕ್ಕೆ ಸೆ.16ರಂದು ಇಡೀ ಬಡಾವಣೆಯಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ಉತ್ಸವದಲ್ಲಿ ಭಾಸ್ಕರ್‌ ಮತ್ತು ಬಾಲಕ ಕೂಡ ಭಾಗಿಯಾಗಿದ್ದರು. ರಾತ್ರಿ 8 ಗಂಟೆ ವೇಳೆಗೆ ಭಾಸ್ಕರ್‌, ಪ್ರಜ್ವಲ್‌ನನ್ನು ಅಪಹರಿಸಲು ನಿರ್ಧರಿಸಿ ಏಡುಕೊಂಡಲುನನ್ನು ಕರೆಸಿಕೊಂಡಿದ್ದ. ಬಳಿಕ ಪಟಾಕಿ ತರಲು ಕಿಯಾ ಕಾರಿನಲ್ಲಿ ಹೋಗೋಣವೆಂದು ನಂಬಿಸಿ ಬಾಲಕನನ್ನು ಕರೆದೊಯ್ದಿದ್ದರು.

ಕಾರನ್ನು ಬಾಗಲೂರಿನ ಬಂಡಿಕೊಡಿಗೇಹಳ್ಳಿ ಸಮೀಪ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕಂಠಪೂರ್ತಿ ಮದ್ಯ ಸೇವಿಸಿದ್ದರು. ಬಳಿಕ ಪ್ರಜ್ವಲ್‌ನನ್ನು ಅಪಹರಿಸುವುದಾಗಿ ತಿಳಿಸಿ ಬೆದರಿಸಿದ್ದರು. ಬಾಲಕ ಪ್ರತಿರೋಧ ತೋರಿದಾಗ ಥಳಿಸಿ, ತಾವು ಹೇಳಿದಂತೆ ವಿಡಿಯೋ ಮಾಡಿಕೊಟ್ಟರೆ ಜೀವಂತವಾಗಿ ಬಿಡುವುದಾಗಿ ಹೇಳಿದ್ದರು.

ಪ್ರಜ್ವಲ್‌ನ ಕೈಕಾಲುಗಳನ್ನು ಸೆಲ್ಲೋ ಟೇಪ್‌ನಿಂದ ಕಟ್ಟಿ ಹಾಕಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಬಳಿಕ ಸಂಚು ಬದಲಿಸಿ ನಿರ್ಮಾಣ ಹಂತದ ಮನೆಯ ಬಳಿ ಕರೆದೊಯ್ದು, ಬಾಲಕನ ತಲೆಯನ್ನು ಸಾರ್ವೆ ಮರಕ್ಕೆ ಗುದ್ದಿದ್ದರು. ಇದರಿಂದ ಪ್ರಜ್ವಲ್‌ ಪ್ರಜ್ಞೆ ಕಳೆದುಕೊಂಡಿದ್ದ. ಸ್ವಲ್ಪ ಸಮಯದ ಬಳಿಕ ಪ್ರಜ್ವಲ್‌ ಮತ್ತೆ ಉಸಿರಾಡುತ್ತಿರುವುದನ್ನು ಗಮನಿಸಿ, ತಲೆ ಮೇಲೆ ಹಾಲೋ ಬ್ರಿಕ್ಸ್‌ ಎತ್ತಿ ಹಾಕಿದ್ದರು. ಪರಿಣಾಮ ಪ್ರಜ್ವಲ್‌ ಸ್ಥಳದಲ್ಲೇ ಮೃತಪಟ್ಟಿದ್ದ.

ಪ್ರಜ್ವಲ್‌ನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಆಂಧ್ರಪ್ರದೇಶದತ್ತ ಹೊರಟಿದ್ದರು. ಭಾಸ್ಕರ್‌ ಅತಿವೇಗವಾಗಿ ಕಾರು ಚಲಾಯಿಸಿ ಹೊಸಹಳ್ಳಿ ಬಳಿ ವಿದ್ಯುತ್‌ ಕಂಬಕ್ಕೆ ಗುದ್ದಿದ್ದಾನೆ. ಅಲ್ಲಿಂದ ಮುಂದೆ ಹುಣಸಮಾರನಹಳ್ಳಿ ರಸ್ತೆಯ ಅಪಾರ್ಟ್‌ಮೆಂಟ್‌ ಬಳಿ ಎರಡು ಕಾರುಗಳಿಗೆ ಗುದ್ದಿದಾಗ ಸ್ಥಳೀಯರು ಅಡ್ಡಗಟ್ಟಿ ಸ್ಥಳೀಯರು, ಗಾಂಜಾ ಅಥವಾ ಮದ್ಯ ಇಟ್ಟುಕೊಂಡಿರುವ ಅನುಮಾನದಲ್ಲಿ ಇಡೀ ವಾಹನ ಶೋಧಿಸಿದ್ದರು. ಕಾರಿನ ಡಿಕ್ಕಿ ತೆರೆದಾಗ ಬಾಲಕನ ಶವ ಕಂಡು ಬೆಚ್ಚಿಬಿದ್ದಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ತಬ್ಬಿಬ್ಬಾದ ಭಾಸ್ಕರ್‌, ಪರಿಚಯದ ಬಾಲಕ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ನಾಟಕವಾಡಿದ್ದ. ಅನುಮಾನಗೊಂಡ ಸ್ಥಳೀಯರು ಪೊಲೀಸ್‌ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸ್ಥಳಕ್ಕೆ ಬಂದ ಪೊಲೀಸರು, ಭಾಸ್ಕರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಕೊಲೆಯ ಅಸಲಿ ಸತ್ಯ ಬಯಲಾಗಿದೆ.

ಮಗ ಮನೆಗೆ ಬಾರದಿದ್ದರಿಂದ ಕಂಗಾಲಾಗಿದ್ದ ಪ್ರಜ್ವಲ್‌ ಪೋಷಕರು ಹುಡುಕಾಟ ಆರಂಭಿಸಿದ್ದರು. ಎಲ್ಲಿಯೂ ಮಗನ ಸುಳಿವು ಸಿಗದಿದ್ದಕ್ಕೆ ತಡರಾತ್ರಿ ಪೊಲೀಸ್‌ ಠಾಣೆಗೆ ಹೋಗಿ ಮಾಹಿತಿ ಕೊಟ್ಟಿದ್ದರು. ಕಾಕತಾಳೀಯವೆಂಬಂತೆ ಅದೇ ವೇಳೆಗೆ ಭಾಸ್ಕರ್‌ನ ಕಾರಿನಲ್ಲಿ ಬಾಲಕನ ಮೃತದೇಹವನ್ನು ವಶಕ್ಕೆ ಪಡೆಯಲಾಗಿತ್ತು. ಮೃತದೇಹ ನೋಡಿದ ಕೂಡಲೇ ಪೋಷಕರು ಗುರುತು ಹಿಡಿದಿದ್ದರು. ಕಾನೂನು ಪ್ರಕ್ರಿಯೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಒಪ್ಪಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article