ಮಂಗಳೂರು :ಎಂಆರ್‌ಪಿಎಲ್ ಸ್ಫೋಟ ದುರಂತ: ಮೃತಪಟ್ಟ ಮತ್ತೋರ್ವ ಗುತ್ತಿಗೆ ನೌಕರ ರಾಜೇಶ್ ಕುಟುಂಬಕ್ಕೆ 1.20 ಕೋಟಿ ಪರಿಹಾರ ಘೋಷಣೆ.

ಮಂಗಳೂರು :ಎಂಆರ್‌ಪಿಎಲ್ ಸ್ಫೋಟ ದುರಂತ: ಮೃತಪಟ್ಟ ಮತ್ತೋರ್ವ ಗುತ್ತಿಗೆ ನೌಕರ ರಾಜೇಶ್ ಕುಟುಂಬಕ್ಕೆ 1.20 ಕೋಟಿ ಪರಿಹಾರ ಘೋಷಣೆ.

DAKSHINA KANNADA  MANGALURU MRPL EXPLOSION TRAGEDY  ಎಂಆರ್‌ಪಿಎಲ್ ಸ್ಫೋಟ ದುರಂತ  ಎಂಆರ್‌ಪಿಎಲ್ ಗುತ್ತಿಗೆ ನೌಕರ ರಾಜೇಶ್
ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ (CHTU) ಸೆಪ್ಟಂಬರ್ 30ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಮತ್ತೋರ್ವ ಗುತ್ತಿಗೆ ನೌಕರ ರಾಜೇಶ್ ಡಿಸಿಲ್ವ ಅವರ ಕುಟುಂಬಕ್ಕೆ ಒಟ್ಟು ₹1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯವನ್ನು ನೀಡುವುದಾಗಿ ಎಂಆರ್‌ಪಿಎಲ್ ಆಡಳಿತ ಮಂಡಳಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ.

ಮೃತ ರಾಜೇಶ್ ಡಿಸಿಲ್ವ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ ನೇರವಾಗಿ ₹90 ಲಕ್ಷ ಆರ್ಥಿಕ ಸಹಾಯಧನ ನೀಡಿದೆ. ಜೊತೆಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಅಂದಾಜು ₹10 ಲಕ್ಷ ಹಾಗೂ ಕಾರ್ಮಿಕರ ಪರಿಹಾರ ಪಾಲಿಸಿಯಡಿ ಅಂದಾಜು ₹20 ಲಕ್ಷ ನೀಡಲಾಗುತ್ತಿದೆ. ಎಲ್ಲ ವಿಮಾ ಸೌಲಭ್ಯ ಹಾಗೂ ಕಂಪನಿಯ ನೆರವು ಸೇರಿ ಮೃತರ ಕುಟುಂಬಕ್ಕೆ ಒಟ್ಟು ಅಂದಾಜು ₹1.20 ಕೋಟಿ ಪರಿಹಾರ ಲಭ್ಯವಾಗಲಿದೆ.

ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು: ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದರು. ಸುರತ್ಕಲ್​ನ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದ ರಾಜೇಶ್ ಡಿಸಿಲ್ವ ಅವರು ಹಲವು ವರ್ಷಗಳಿಂದ ಎಂಆರ್‌ಪಿಲ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ಸೆ.30ರಂದು ಸಂಸ್ಥೆಯ ಫೇಸ್ 3ರ CHTU (Coker Hydro Treating Unit) ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಅವರು ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದರು. ಬಳಿಕ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸ್ಫೋಟದಲ್ಲಿ ಹಳೆಯಂಗಡಿ ನಿವಾಸಿ ಮನೀಶ್ ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು.

₹1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯ: ಅಗ್ನಿ ಅವಘಡದಲ್ಲಿ ಮೃತಪಟ್ಟ ಗುತ್ತಿಗೆ ನೌಕರ ಮನೀಶ್ ಕರ್ಕಡ ಅವರ ಕುಟುಂಬಕ್ಕೂ ಒಟ್ಟು 1.20 ಕೋಟಿ ರೂ. ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯವನ್ನು ನೀಡುವುದಾಗಿ ಎಂಆರ್‌ಪಿಎಲ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿತ್ತು. ಕಾರ್ಮಿಕ ಸಂಘಟನೆಗಳ ತೀವ್ರ ಪ್ರತಿಭಟನೆ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರ ಸಂಧಾನದ ಬೆನ್ನಲ್ಲೇ ಎಂಆರ್‌ಪಿಎಲ್ ಈ ಅಧಿಕೃತ ಆದೇಶ ಹೊರಡಿಸಿತ್ತು.

ಮೃತ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ ನೇರವಾಗಿ 90 ಲಕ್ಷ ರೂ. ಆರ್ಥಿಕ ಸಹಾಯಧನ, ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಅಂದಾಜು 10 ಲಕ್ಷ ರೂ. ಹಾಗೂ ಕಾರ್ಮಿಕರ ಪರಿಹಾರ ಪಾಲಿಸಿಯಡಿ ಅಂದಾಜು 20 ಲಕ್ಷ ರೂ. ನೀಡಲಾಗುತ್ತಿದೆ. ಎಲ್ಲ ವಿಮಾ ಸೌಲಭ್ಯ ಹಾಗೂ ಕಂಪನಿಯ ನೆರವು ಸೇರಿ ಮೃತರ ಕುಟುಂಬಕ್ಕೆ ಒಟ್ಟು ಅಂದಾಜು 1.20 ಕೋಟಿ (ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ) ರೂ. ಪರಿಹಾರ ಲಭ್ಯವಾಗಲಿದೆ.

Ads on article

Advertise in articles 1

advertising articles 2

Advertise under the article