ಮಂಗಳೂರು :ಆನ್‌ಲೈನ್ ಲೋನ್ ಆ್ಯಪ್ ವಂಚಕರ ಜಾಲ: ಸಾಲ ತೀರಿಸಿದರೂ ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್‌ಮೇಲ್; ಮಹಿಳೆಗೆ ₹2.90 ಲಕ್ಷ ವಂಚನೆ.

ಮಂಗಳೂರು :ಆನ್‌ಲೈನ್ ಲೋನ್ ಆ್ಯಪ್ ವಂಚಕರ ಜಾಲ: ಸಾಲ ತೀರಿಸಿದರೂ ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್‌ಮೇಲ್; ಮಹಿಳೆಗೆ ₹2.90 ಲಕ್ಷ ವಂಚನೆ.

Woman defrauded of 2 Lakh 90K ; blackmailed with morphed photos despite repaying loan
ಮಂಗಳೂರು: ಆನ್‌ಲೈನ್ ಲೋನ್ ಆ್ಯಪ್‌ಗಳ ಮೂಲಕ ಸಾಲ ಪಡೆದು ಅದನ್ನು ಬಡ್ಡಿ ಸಮೇತ ಸಂಪೂರ್ಣವಾಗಿ ಮರುಪಾವತಿಸಿದರೂ ಕೂಡ ಅಶ್ಲೀಲವಾಗಿ ಫೋಟೋ ಮಾರ್ಫ್ ಮಾಡಿ ವೈರಲ್ ಮಾಡುವ ಬೆದರಿಕೆಯೊಡ್ಡಿ ಮಹಿಳೆಯೊಬ್ಬರಿಂದ ಬರೋಬ್ಬರಿ 2.90 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ನಗರದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್​ ಪ್ರಕಟಣೆ ತಿಳಿಸಿದೆ.
ಘಟನೆಯ ವಿವರ: ನಗರದ 37 ವರ್ಷದ ಮಹಿಳೆಯೊಬ್ಬರಿಗೆ ವೈಯಕ್ತಿಕ ಕಾರಣಗಳಿಗಾಗಿ ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ, ಕಳೆದ ಮೇ ತಿಂಗಳಲ್ಲಿ ಮೊಬೈಲ್‌ನಲ್ಲಿ ಗೂಗಲ್ ಮೂಲಕ ಸಾಲದ ಆ್ಯಪ್‌ಗಳ ಬಗ್ಗೆ ಹುಡುಕಾಡಿದ್ದರು. ಈ ವೇಳೆ ‘Prefer App’, ‘Credit App’ ಹಾಗೂ ‘Flexy b’ ಎಂಬ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ವೈಯಕ್ತಿಕ ವಿವರ ಹಾಗೂ ಆಧಾರ್ - ವಿಳಾಸ ದಾಖಲೆಗಳನ್ನು ನಮೂದಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸಲ್ಲಿಸಿದ ಬೆನ್ನಲ್ಲೇ ದಿನಾಂಕ 22-05-2026 ರಂದು ಮಹಿಳೆಯ ಎಸ್‌ಬಿಐ (SBI) ಖಾತೆಗೆ ₹50,000 ಹಾಗೂ ಕೆನರಾ ಬ್ಯಾಂಕ್ ಖಾತೆಗೆ ₹1,50,000 ಸೇರಿದಂತೆ ಒಟ್ಟು ₹2,00,000 ಸಾಲದ ಮೊತ್ತ ಜಮೆಯಾಗಿತ್ತು.

ಸಾಲ ತೀರಿಸಿದರೂ ಮುಗಿಯದ ಕಿರುಕುಳ: ಸಾಲ ಪಡೆದ ಬಳಿಕ ಮಹಿಳೆಯು ಪ್ರತಿ ತಿಂಗಳು ನಿಯಮಿತವಾಗಿ ಕಂತಿನ ರೂಪದಲ್ಲಿ ಒಟ್ಟು ₹13,300 ಹಣವನ್ನು ಮೂರು ತಿಂಗಳು ಪಾವತಿಸಿದ್ದರು. ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ಉಳಿದ ಸಂಪೂರ್ಣ ಮೊತ್ತವನ್ನು ಬಡ್ಡಿ ಸಮೇತ ಒಟ್ಟಿಗೆ ₹2,15,000 ಪಾವತಿಸಿ ಸಾಲದ ಖಾತೆಯನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿದ್ದರು.

ಆದರೆ, ಸಾಲ ತೀರಿತು ಎಂದು ನಿರಾಳವಾಗಿದ್ದ ಮಹಿಳೆಗೆ ವಂಚಕರು ಹೊಸ ಬಲೆ ಬೀಸಿದ್ದರು. ಅಪರಿಚಿತರು ಮಹಿಳೆಯ ಎಸ್‌ಬಿಐ ಖಾತೆಗೆ ಅವರ ಅನುಮತಿಯಿಲ್ಲದೆ ಹಂತ ಹಂತವಾಗಿ ₹5,000, ₹10,000 ಹಾಗೂ ₹30,000 ಹಣವನ್ನು ಜಮೆ ಮಾಡಿದ್ದರು. ಬಳಿಕ 8031462813, 8216567489 ಹಾಗೂ +911600303452 ಸಂಖ್ಯೆಗಳಿಂದ ಕರೆ ಮಾಡಿ, "ನಿಮ್ಮ ಖಾತೆಗೆ ಹಣ ಹಾಕಿದ್ದೇವೆ, ಅದಕ್ಕೆ ಬಡ್ಡಿ ಸೇರಿಸಿ ವಾಪಸ್ ನೀಡಬೇಕು" ಎಂದು ಧಮಕಿ ಹಾಕಲಾರಂಭಿಸಿದ್ದರು.

ಫೋಟೋ ಮಾರ್ಫ್ ಬೆದರಿಕೆಗೆ ₹2.90 ಲಕ್ಷ ಸುಲಿಗೆ: ಹಣ ನೀಡಲು ನಿರಾಕರಿಸಿದಾಗ, ಮಹಿಳೆಯ ವೈಯಕ್ತಿಕ ಭಾವಚಿತ್ರಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಮತ್ತು ಅವರ ಕುಟುಂಬಸ್ಥರು ಹಾಗೂ ವಾಟ್ಸ್​ಆ್ಯಪ್​ ಕಾಂಟ್ಯಾಕ್ಟ್‌ಗಳಿಗೆ ಕಳುಹಿಸುವುದಾಗಿ ಆನ್‌ಲೈನ್ ಗ್ಯಾಂಗ್ ಬೆದರಿಕೆ ಹಾಕಿದೆ.

ತೀವ್ರ ಆತಂಕ ಹಾಗೂ ಮರ್ಯಾದೆಗೆ ಅಂಜಿದ ಮಹಿಳೆಯು ವಂಚಕರು ಕಳುಹಿಸಿದ ಪೇಮೆಂಟ್ ಲಿಂಕ್‌ಗಳಿಗೆ ದಿನಾಂಕ 23-07-2026 ರಿಂದ 02-10-2026 ರ ಅವಧಿಯಲ್ಲಿ ತಮ್ಮ ಎಸ್‌ಬಿಐ ಖಾತೆಯಿಂದ ₹2,35,994 ಹಾಗೂ ಕೆನರಾ ಬ್ಯಾಂಕ್ ಖಾತೆಯಿಂದ ₹54,582 ಸೇರಿದಂತೆ ಒಟ್ಟು ₹2,90,576 ಹಣವನ್ನು ಹಂತ - ಹಂತವಾಗಿ ವರ್ಗಾಯಿಸಿದ್ದರು.

ಎಷ್ಟೇ ಹಣ ನೀಡಿದರೂ ಕಿರುಕುಳ ನಿಲ್ಲದಿದ್ದಾಗ ತಾವು ವ್ಯವಸ್ಥಿತ ಬ್ಲ್ಯಾಕ್‌ಮೇಲ್ ಜಾಲಕ್ಕೆ ಸಿಲುಕಿ ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ, ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article