ಗುಜರಾತ್ :30 ವರ್ಷಗಳಿಂದ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದ 16 ನಕಲಿ ವೈದ್ಯರ ಬಂಧನ.
ನಕಲಿ ರೋಗಿಗಳನ್ನು ಬಳಸಿಕೊಂಡು ಬಲೆ: ವರದಿಗಳ ಪ್ರಕಾರ, ಎಸ್ಒಜಿ ಪೊಲೀಸ್ ಇನ್ಸ್ಪೆಕ್ಟರ್ ಎ.ಎಸ್. ಸೋನಾರಾ ನೇತೃತ್ವದ ತಂಡಕ್ಕೆ, ಪಾಂಡೇಸರ ಪ್ರದೇಶದಲ್ಲಿ ಹಲವು ನಕಲಿ ವೈದ್ಯರು ಕ್ಲಿನಿಕ್ಗಳನ್ನು ನಡೆಸುತ್ತಿದ್ದಾರೆ. ಅವರು ಬಡ ಕಾರ್ಮಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಎಸ್ಒಜಿ ತಂಡವು ಶಂಕಿತ ಕ್ಲಿನಿಕ್ಗಳಿಗೆ ನಕಲಿ ರೋಗಿಗಳನ್ನು ಕಳುಹಿಸಿತ್ತು. ಮಾಹಿತಿ ದೃಢಪಟ್ಟ ನಂತರ, ಮುಖ್ಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅನಿಲ್ ಬಿ. ಪಟೇಲ್ ಅವರ ಸಹಯೋಗದೊಂದಿಗೆ ಜಂಟಿ ತಂಡಗಳು 16 ಕ್ಲಿನಿಕ್ಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದವು.
ಮರದ ಮಂಚಗಳ ಮೇಲೆ ರೋಗಿಗಳಿಗೆ ಚಿಕಿತ್ಸೆ: ದಾಳಿಯ ಸಮಯದಲ್ಲಿ, ಕೆಲವು ಕ್ಲಿನಿಕ್ಗಳ ಸ್ಥಿತಿ ಅತ್ಯಂತ ಶೋಚನೀಯವಾಗಿರುವುದು ಕಂಡುಬಂದಿದೆ. ರೋಗಿಗಳಿಗೆ ಸಾಮಾನ್ಯ ಮರದ ಮಂಚಗಳ ಮೇಲೆ ಮಲಗಿಸಿ ಗ್ಲೂಕೋಸ್ ಡ್ರಿಪ್ ನೀಡಲಾಗುತ್ತಿತ್ತು. ಔಷಧಗಳು ಮತ್ತು ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದು ರೋಗಿಗಳ ಆರೋಗ್ಯಕ್ಕೆ ಗಂಭೀರ ಅಪಾಯ ತರುವ ಸ್ಥಿತಿಯಲ್ಲಿತ್ತು.
33 ವರ್ಷಗಳಿಂದ ನಕಲಿ ವೈದ್ಯ ಸೇವೆ: ಈ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದವರಲ್ಲಿ, ನಕಲಿ ವೈದ್ಯರೆಂದು ಈ ಹಿಂದೆ ಬಂಧಿಸಿದ್ದ ಮೂವರು ವ್ಯಕ್ತಿಗಳೂ ಇದ್ದಾರೆ. ಅವರಲ್ಲಿ ಒಬ್ಬರು 'ಸಾಯಿ ಧಾಮ್ ಕ್ಲಿನಿಕ್' ನಡೆಸುತ್ತಿದ್ದ 54 ವರ್ಷದ ಸಿಯಾರಾಮ್ ಮೌರ್ಯ. ಈತ 24 ವರ್ಷಗಳಿಂದ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ. 2002ರಲ್ಲಿ ಇದೇ ಆರೋಪದ ಮೇಲೆ ಬಂಧಿತನಾಗಿದ್ದ. ಇನ್ನೊಬ್ಬ 'ಚಾನ್ಸಿ ಕ್ಲಿನಿಕ್'ನ 58 ವರ್ಷದ ವಿನೋದ್ ಬಿಸ್ವಾಸ್. ಕೇವಲ 12ನೇ ತರಗತಿ ಉತ್ತೀರ್ಣರಾಗಿರುವ ಈತ ಸುಮಾರು 30 ವರ್ಷಗಳಿಂದ ನಕಲಿ ವೈದ್ಯನಾಗಿದ್ದ. 2008ರಲ್ಲಿ ಈತನನ್ನೂ ಬಂಧಿಸಲಾಗಿತ್ತು. 'ನೀರ್ ಕ್ಲಿನಿಕ್'ನ 31 ವರ್ಷದ ಸದ್ದಾಂ ಬಂಖಾನ್ ಕೂಡ ಈ ಹಿಂದಿನ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ 'ಫ್ರೀ ಸೇವಾ ಸದನ್' ನಡೆಸುತ್ತಿದ್ದ 58 ವರ್ಷದ ಕಪಿಲ್ ಕುಮಾರ್ ಅರ್ಜುನ್ ಪ್ರಸಾದ್ ವರ್ಮಾ ಅವರದ್ದು. ಕೇವಲ 10ನೇ ತರಗತಿ ಉತ್ತೀರ್ಣರಾಗಿದ್ದರೂ, ಆತ ಕಳೆದ 33 ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಕ್ಲಿನಿಕ್ಗಳನ್ನು ನಡೆಸುತ್ತಿದ್ದ ಎಂಬುದು ಪತ್ತೆಯಾಗಿದೆ.
16 ಕ್ಲಿನಿಕ್ಗಳಿಂದ 1.82 ಲಕ್ಷ ಮೌಲ್ಯದ ಔಷಧಗಳು, ಇಂಜೆಕ್ಷನ್ಗಳು, ಕೆಮ್ಮಿನ ಸಿರಪ್ಗಳು ಮತ್ತು ವಿವಿಧ ವೈದ್ಯಕೀಯ ಉಪಕರಣಗಳನ್ನು ಎಸ್ಒಜಿ ತ್ತು ಜಿಲ್ಲಾ ಆರೋಗ್ಯ ಇಲಾಖೆಯ ತಂಡಗಳು ವಶಪಡಿಸಿಕೊಂಡಿವೆ.