ರಾಷ್ಟ್ರೀಯ ಸುದ್ದಿ :ಹಾವಿನ ವಿಷ! ಹನ್ನೆರಡು ನಿಮಿಷ.ಭರವಸೆ ಮೂಡಿಸಿದ ಔಷಧ ಸಂಶೋಧನೆ..!

ರಾಷ್ಟ್ರೀಯ ಸುದ್ದಿ :ಹಾವಿನ ವಿಷ! ಹನ್ನೆರಡು ನಿಮಿಷ.ಭರವಸೆ ಮೂಡಿಸಿದ ಔಷಧ ಸಂಶೋಧನೆ..!

ರಾಷ್ಟ್ರೀಯ ಸುದ್ದಿ :ಹಾವಿನ ವಿಷ! ಹನ್ನೆರಡು ನಿಮಿಷ.
ಭರವಸೆ ಮೂಡಿಸಿದ ಔಷಧ ಸಂಶೋಧನೆ
ವಿಷಕಾರಿ ಹಾವು, ಅದರಲ್ಲೂ ನಾಗರ ಹಾವುಗಳ ಕಡಿತಕ್ಕೊಳಗಾದವರಿಗೆ ಭಾರತದಲ್ಲಿ ಚಿಕಿತ್ಸೆಗೆ ನಡುವೆಯೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರ (ಸಿಐಎಸ್) ಮತ್ತು ಡೆನ್ಮಾರ್ಕ್ನ ತಾಂತ್ರಿಕ ವಿಶ್ವವಿದ್ಯಾಲಯದ (ಡಿಟಿಯು) ವಿಜ್ಞಾನಿಗಳು ಜಂಟಿಯಾಗಿ ಹೊಸ ಪ್ರತಿವಿಷವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಸಂಶೋಧನೆಯ ಫಲಿತಾಂಶಗಳು ಸೈನ್ಸ್ ಟ್ರಾನ್ಸ್‌ ಲೇಷನಲ್ ಮೆಡಿಸಿನ್ ಎಂಬ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಭಾರತದ ವಿವಿಧ ಜಾತಿಯ ನಾಗರಹಾವುಗಳು ಮತ್ತು ಕಾಳಿಂಗ ಸರ್ಪದ ವಿಷಕ್ಕ ಪ್ರತಿಕ್ರಿಯಿಸುವ ಮರುಸಂಯೋಜಿತ ಪ್ರತಿವಿಷವನ್ನು ಅಭಿವೃದ್ಧಿಪಡಿಸಿರುವುದು ಈ ಸಂಶೋಧನೆಯ ವಿಶೇಷತೆ, ಈ ಹೊಸ ಸಂಶೋಧನೆಯಿಂದಾಗಿ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಭರವಸೆ ಮೂಡಿದ್ದು, ಹಾವು ಕಡಿತಕ್ಕೆ ಒಳಗಾದವರಿಗೆ ಸಂಜೀವಿನಿಯಾಗುವ ಆಶಾಭಾವನೆ ಮೂಡಿಸಿದೆ.

ಹೊಸ ಪ್ರತಿವಿಷ ಅಭಿವೃದ್ಧಿಪಡಿಸಿದ್ದು ಹೇಗೆ?

ಡೆನ್ಮಾರ್ಕ್ನ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿ ಆಂಡ್ರಿಯಾಸ್ ಲಾಸ್‌ಸೆನ್ ಮತ್ತು ಅವರ ಸಹೋದ್ಯೋಗಿಗಳು ಈ ಹಿಂದೆ ಆಫ್ರಿಕಾದ ಕೆಲವು ವಿಷಕಾರಿ ಹಾವುಗಳ ವಿರುದ್ಧ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಿ ಪ್ರಯೋಗಿಸಿದ್ದರು. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ನಾನಾ ಪ್ರಬೇಧಗಳ ನಾಗರಹಾವಿನ ವಿಷವನ್ನು ಎದುರಿಸಬಲ್ಲ ಪ್ರತಿಕಾಯಗಳ ಮಿಶ್ರಣವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಮಿಶ್ರಣವನ್ನು ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷಿಸಲಾಗಿದೆ. ಕನ್ನಡಕನಾಗರ ಏಕವೃತ್ತ ನಾಗರ ಮತ್ತು ಕಾಳಿಂಗ ಸರ್ಪಗಳ ಎರಡು ಪ್ರತ್ಯೇಕ ಪ್ರಭೇದಗಳ ವಿಷವನ್ನು ಸಂಗ್ರಹಿಸಿ ಅದನ್ನು ಪ್ರತಿವಿಷವಾಗಿ ಪರಿವರ್ತಿಸಿ ಇಲಿಗಳ ಮೇಲೆ ಪ್ರಯೋಗಿಸಲಾಯಿತು. ವಿಷ ಚುಚ್ಚಿದ 30 ನಿಮಿಷಗಳ ಬಳಿಕವೂ ಪ್ರತಿಕಾಯಗಳ ಮಿಶ್ರಣವನ್ನು ನೀಡಿದಾಗ ಪರೀಕ್ಷೆಗೆ ಒಳಪಟ್ಟ ಇಲಿಗಳು ಸಾವಿನಿಂದ ಪಾರಾಗಿರುವುದು ಸಂಶೋಧನೆಯಲ್ಲಿ ಕಂಡುಬದಿದೆ.

ಪರಿಣಾಮಕಾರಿ ಚಿಕಿತ್ಸೆ

ಹಿಂದಿನ ಕೆಲವು ಪ್ರಯೋಗಗಳಲ್ಲಿ ವಿಷವನ್ನು ನಿಷ್ಕ್ರಿಯಗೊಳಿಸಲು ಹೆಚ್ಚಿನ ಪ್ರಮಾಣದ ಪ್ರತಿಕಾಯಗಳ ಅಗತ್ಯವಿತ್ತು, ಮನುಷ್ಯರ ಚಿಕಿತ್ಸೆಯಲ್ಲಿಯೂ ಇಂತಹ ವಿಧಾನ ಅನುಸರಿಸಿದರೆ ದೊಡ್ಡ ಪ್ರಮಾಣದ ಪ್ರತಿಕಾಯಗಳನ್ನು ನೀಡಬೇಕಾಗುವ ಅಗತ್ಯವಿತ್ತು ಆದರೆ, ಸೂಕ್ತವಾಗಿ ಆಯ್ಕೆಮಾಡಿ ವಿನ್ಯಾಸಗೊಳಿಸಿದ ಪ್ರತಿಕಾಯಗಳ ಅತ್ಯಲ್ಪ ಪ್ರಮಾಣದಿಂದಲೂ ಹಾವಿನ ವಿಷವನ್ನು ನಿಷ್ಕ್ರಿಯಗೊಳಿಸಲು ಸಾಧ್ಯ ಎಂಬುದನ್ನು ಪ್ರಸ್ತುತ ಸಂಶೋಧನೆ ತೋರಿಸಿದೆ ಎಂದು ಐಐಎಸ್ ಸಿಯ ಪರಿಸರ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ತಂಡದ ಸದಸ್ಯ ಕಾರ್ತಿಕ್ ಸುನಗರ್ ತಮ್ಮ ಪ್ರಬಂಧದಲ್ಲಿ ವಿವರಿಸಿದ್ದಾರೆ.

ಈ ವಿಧಾನವು ಭವಿಷ್ಯದಲ್ಲಿ ಕಡಿಮೆ ಪ್ರಮಾಣದ ಪ್ರತಿಕಾಯಗಳನ್ನು ಬಳಸಿಕೊಂಡು ಹೆಚ್ಚು ಪರಿಣಾಮಕಾರಿ ಪ್ರತಿವಿಷಗಳನ್ನು ಅಭಿವೃದ್ಧಿಪಡಿಸಲು ನೆರವಾಗಬಹುದು. ಇದರಿಂದ ಚಿಕಿತ್ಸೆಯ ವೆಚ್ಚ ಹಾಗೂ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳ ಬಳಕೆಗೆ ಸಂಬಂಧಿಸಿದ ಸುರಕ್ಷಕಾ ಸಮಸ್ಯೆಗಳನ್ನು ತಗ್ಗಿಸುವ ಸಾಧ್ಯತೆಯಿದೆ.

ಔಷಧ ಅಭಿವೃದ್ಧಿ ಹಿಂದಿನ ಸವಾಲು

ಭಾರತದಲ್ಲಿ ನಾಗರಹಾವಿನ ಹಲವು ಪ್ರಭೇದಗಳಿವೆ. ಈ ಹಾವು ಕಡಿತಕ್ಕೆ ಒಳಗಾದರೆ ಹಾವಿನ ವಿಷದಲ್ಲಿರುವ ಕೆಲವು ವಿಷಕಾರಿ ಪ್ರೋಟೀನ್ ಗಳು ನರಗಳಿಂದ ಸ್ನಾಯುಗಳಿಗೆ ಸಂದೇಶ ರವಾನೆಯಾಗುವುದನ್ನು ತಡೆಯುತ್ತವೆ. ಇದರಿಂದ ಉಸಿರಾಟಕ್ಕೆ ಅಗತ್ಯವಾದ ಸ್ನಾಯುಗಳು ಕೆಲಸ ಮಾಡದ ಸ್ಥಿತಿ ಉಂಟಾಗಿ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದರಿಂದ ತಕ್ಷಣ ಚಿಕಿತ್ಸೆ ಸಿಗದಿದ್ದರೆ ಜೀವಕ್ಕೆ ಅಪಾಯವಿದೆ.

ಉಡುಪಿಯ ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ಹೇಳುವಂತೆ, "ಭಾರತದಲ್ಲಿ ಕಂಡುಬರುವ ನಾಗರಹಾವುಗಳ ಪೈಕಿ ವಿವಿಧ ಪ್ರಭೇದಗಳ ವಿಷದ ಸಂಯೋಜನೆ ವಿಭಿನ್ನವಾಗಿರುತ್ತದೆ. ಒಂದೇ ಪ್ರಭೇದದ ಹಾವುಗಳ ವಿಷದಲ್ಲಿಯೂ ಅವು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಕೆಫೆರುತ್ತದೆ. ಹೀಗಾಗಿ ಎಲ್ಲ ಪ್ರಭೇದಗಳ ವಿಷಕ್ಕೂ ಒಂದೇ ಮಾದರಿಯ ಪ್ರತಿವಿಷದ ಚಿಕಿತ್ಸೆ ಪರಿಣಾಮಕಾರಿಯಾಗಿ ಕೆಲಸ ಮಾಡದ ಕಾರಣ ಹಾವು ಕಡಿತದ ಚಿಕಿತ್ಸೆಯಲ್ಲಿ ಪೂರ್ಣ ಪ್ರಮಾಣದ ಔಷಧವನ್ನು ಕಂಡು ಹಿಡಿಯಲು ಸವಾಲಾಗುತ್ತಿದೆ,'' ಎನ್ನುತ್ತಾರೆ.

ಸದ್ಯ ಒಂದೇ ಮಾದರಿಯ ಪ್ರತಿವಿಷ

ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಬಹುಸಂಯೋಜಿತ ಪ್ರತಿವಿಷ (ಪಾಲಿವ್ಯಾಲೆಂಟ್ ಆಂಟಿ ವೆನಮ್) ಅನ್ನು ದಶಕಗಳಿಂದ ಹಾವು ಕಡಿತಕ್ಕೆ ಒಳಗಾದವರಿಗೆ ಪ್ರತಿವಿಷವಾಗಿ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಕುದುರೆಗಳಂತಹ ಪ್ರಾಣಿಗಳಲ್ಲಿ ನಿರ್ದಿಷ್ಟ ಹಾವುಗಳ ವಿಷದ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಿ, ಅವುಗಳಿಂದ ಪ್ರತಿವಿಷವನ್ನು ತಯಾರಿಸಲಾಗುತ್ತದೆ. ಇದನ್ನು ಶುದ್ದೀಕರಿಸಿ ವೈದ್ಯಕೀಯ ಬಳಕೆಗೆ ಸಿದ್ಧಪಡಿಸಲಾಗುತ್ತದೆ. ಕನ್ನಡಕ ನಾಗರ, ಮಂಡಲಹಾವು, ಗರಗಸ ಹುರುಪ ಹಾಗೂ ಕಟ್ಟದ ಹಾವು ಸೇರಿ ಬಿಗ್ ಫೋರ್ ಎಂದು ಕರೆಯಲ್ಪಡುವ ನಾಲ್ಕು ಪ್ರಮುಖ ಜಾತಿಯ ಹಾವುಗಳ ಕಡಿತಕ್ಕೆ ಇದೇ ಪ್ರತಿವಿಷವನ್ನು ಬಳಸಲಾಗುತ್ತದೆ. ಆದರೆ ಇದು ಕಾಳಿಂಗ ಸರ್ಪದಂಥ ಇತರ ಕೆಲವು ಪ್ರಬೇಧಗಳ ಕಡಿತಕ್ಕೆ ಪ್ರತಿವಿಷವಾಗಿ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದಾಗಿ ದೇಶದಲ್ಲಿ ವರ್ಷಕ್ಕೆ ಹಾವು ಕಡಿತಕ್ಕೆ ಒಳಗಾದವರಲ್ಲಿ ಹೆಚ್ಚಿನ ಮಂದಿ ಸಾವಿಗೀಡಾಗುತ್ತಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಸುಮಾರು 50,000ಕ್ಕೂ ಅಧಿಕ ಮಂದಿ ಬಲಿಯಾಗುತ್ತಿದ್ದಾರೆ. ಭಾರತದ ಅತ್ಯಂತ ವಿಷಕಾರಿ ನಾಲ್ಕು ಪ್ರಮುಖ ಹಾವುಗಳ ಪೈಕಿ ಒಂದಾದ ಕನ್ನಡಕ ನಾಗರಹಾವಿನ ಕಡಿತವು ಹಾವು ಕಡಿತದ ಒಟ್ಟು ಸಾವುಗಳಲ್ಲಿ ಶೇ.12.5ರಷ್ಟಿದೆ ಹಾವು ಯಾವ ಪ್ರಭೇದಕ್ಕೆ ಸೇರಿದೆ ಎಂಬುದನ್ನು ಸಂತ್ರಸ್ತರು ಗುರುತಿಸಲು ಸಾಧ್ಯವಾಗದ ಸಂದರ್ಭಗಳೂ ಇರುವುದರಿಂದ ಈ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

ಹಾವುಗಳ ಪ್ರಬೇಧಗಳು ಮತ್ತು ಪ್ರಾದೇಶಿಕವಾಗಿ ಅವುಗಳ

ವಿಷಗಳಲ್ಲಿ ವ್ಯತ್ಯಾಸ ಇರುತ್ತದೆ. ಹಾಗಾಗಿ ಹಾವುಗಳ ಕಡಿತಕ್ಕೆ ಒಳಗಾದವರ ಚಿಕಿತ್ಸೆ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗುತ್ತಿದೆ. ದಶಕಗಳಿಂದ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೂ ಹಲವು ಪ್ರಕರಣದಲ್ಲಿ ಪ್ರತಿವಿಷ ಚಿಕಿತ್ಸೆ ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವುದನ್ನು ನೋಡುತ್ತಿದ್ದೇವೆ. ಸದ್ಯ ನಡೆದಿರುವ ಸಂಶೋಧನೆ ಭವಿಷ್ಯದ ಹಾವು ಕಡಿತದ ಪ್ರತಿವಿಷ ಚಿಕಿತ್ಸೆಯಲ್ಲಿ ಹೊಸ ಭರವಸೆ ಮೂಡಿಸಿದೆ.

-ಗುರುರಾಜ್ ಸನಿಲ್ ಉರಗ ತಜ್ಞ ಉಡುಪಿ

ನಾಟಿ ಚಿಕಿತ್ಸೆಗೇ ಜನರ ಮೊರೆ

ದೇಶದ ಗ್ರಾಮೀಣ ಭಾಗದಲ್ಲಿ ಈಗಲೂ ಹಾವು ಕಡಿತಕ್ಕೆ ಒಳಗಾದವರಲ್ಲಿ ಬಹುಪಾಲು ಮಂದಿ ನಾಟಿ ಔಷಧ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಆಧುನಿಕ ಚಿಕಿತ್ಸಾ ವಿಧಾನದಲ್ಲಿ ಕೆಲವು ವಿಷ ಹಾವುಗಳ ಕಡಿತಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದೇ ಇರುವುದರಿಂದ ನಾಟಿ ಔಷಧಕ್ಕೆ ಮೊರೆ ಹೋಗುತ್ತಿದ್ದಾರೆ. ಹಾವು ಕಡಿತಕ್ಕೆ ಒಳಗಾದವರು ತಕ್ಷಣಕ್ಕೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಜಾಗೃತಿ ಮೂಡಿಸಿದರೂ ನಾಟಿ ಔಷಧ ಚಿಕಿತ್ಸೆ ಇಂದಿಗೂ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಎಲ್ಲಾ ವಿಷಗಳಿಗೂ ರಾಮಬಾಣ!

ಈ ಸಂಶೋಧನೆಯ ಪ್ರತಿವಿಷವು ಯಶಸ್ಸು ಕಂಡರೆ

ಭವಿಷ್ಯದಲ್ಲಿ ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧ ಪ್ರದೇಶಗಳಲ್ಲಿರುವ ವಿಷಕಾರಿ ಹಾವುಗಳ ವಿಷದ ವಿರುದ್ಧವೂ ಪ್ರತಿವಿಷವಾಗಿ ಬಳಸುವ ಸಾಧ್ಯತೆಯಿದೆ ಆಯಾ ಪ್ರದೇಶದ ಹಾವುಗಳ ವಿಷದಲ್ಲಿರುವ ಪ್ರಮುಖ ವಿಷಕಾರಿ ಅಂಶಗಳನ್ನು ಗುರಿಯಾಗಿಸಿಕೊಂಡು ಪ್ರತ್ಯೇಕ ಪ್ರತಿವಿಷಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಸಂಶೋಧಕರು ಆಶಿಸಿದ್ದಾರೆ. ಮರುಸಂಯೋಜಿತ ಪ್ರತಿವಿಷಗಳನ್ನು ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲು ಈ ಸಂಶೋಧನೆ ಮಾರ್ಗದರ್ಶಿಯಾಗಲಿದೆ ಎಂದು ಡೆನ್ಮಾರ್ಕ್ ವಿಜ್ಞಾನಿ ಅಂಡ್ರಿಯಾಸ್ ಲಾಸ್ಟ್‌ಸೆನ್ ಅಭಿಪ್ರಾಯಪಟ್ಟಿದ್ದಾರೆ.

ಬೇಕಿದೆ ಇನ್ನಷ್ಟು ಸಂಶೋಧನೆ

ಸದ್ಯ ಈ ಪ್ರತಿವಿಷವನ್ನು ಇಲಿಗಳ ಮೇಲೆ ಮಾತ್ರ ಪ್ರಯೋಗಿಸಿ ಯಶಸ್ಸು ಕಾಣಲಾಗಿದೆ. ಮನುಷ್ಯರಲ್ಲಿ ಇದರ ಸುರಕ್ಷತೆ, ಪರಿಣಾಮಕಾರಿ ಮತ್ತು ಚಿಕಿತ್ಸೆಯ ಬಳಕೆಯನ್ನು ಖಚಿತಪಡಿಸಲು ಮುಂದಿನ ಹಂತಗಳಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ವೈದ್ಯಕೀಯ ಪ್ರಯೋಗಗಳ ಅಗತ್ಯವಿದೆ. ಹೀಗಾಗಿ, ಸದ್ಯಕ್ಕೆ ಇದನ್ನು ಮಾನವ ಬಳಕೆಗೆ ಸಿದ್ದವಾಗಿರುವ ಚಿಕಿತ್ಸೆಯೆಂದು ಪರಿಗಣಿಸಲಾಗದು. ಆದರೆ ಇದರಲ್ಲೇ ಹಂತ ಹಂತವಾಗಿ ಸಂಶೋಧನೆಗಳು ನಡೆದರೆ ನಾಗರಹಾವಿನ ಕಡಿತಕ್ಕೆ ಒಳಗಾದವರಿಗೆ ಪ್ರತಿವಿಷವಾಗಿ ಚಿಕಿತ್ಸೆಗೆ ಬಳಕೆಗೆ ಶೀಘ್ರು ಲಭ್ಯವಾಗುವ ಸಾಧ್ಯತೆ ಇದೆ ಎಂಬುದು ವೈದ್ಯಕೀಯ ವಿಜ್ಞಾನದ ಆಶಾವಾದ.


Ads on article

Advertise in articles 1

advertising articles 2

Advertise under the article