'ಶಾಮನಿಸಂ' ಆಕರ್ಷಣೆ ಹೊಂದಿದ ಯುವತಿ ನಾಪತ್ತೆ : ಆತ್ಮಗಳೊಂದಿಗೆ ಸಂವಹನ ಕಲಿಕೆಗೆ ಮನೆ ಬಿಟ್ಟ ಶಂಕೆ
Friday, December 31, 2021
ಬೆಂಗಳೂರು, ಡಿ.31 : ಅಧ್ಯಾತ್ಮ ವಿಚಾರಗಳ ಬಗ್ಗೆ ಆಸಕ್ತಿ ಹೊಂದಿದ್ದ ಯುವತಿಯೊಬ್ಬಳು ಮನೆಯಿಂದ ಏಕಾಏಕಿ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಬ್ರಹ್ಮಣ್ಯ ನಗರ ನಿವಾಸಿ ಅಭಿಷೇಕ್ ಹಾಗೂ ಅರ್ಚನಾ ದಂಪತಿಯ ಏಕೈಕ ಪುತ್ರಿ ಅನುಷ್ಕಾ(17) ನಾಪತ್ತೆಯಾದಾಕೆ.
ಈಕೆ ಕಳೆದ ಎರಡು ತಿಂಗಳಿನಿಂದ ಮನೆಗೆ ಬಾರದಿರುವುದರಿಂದ ಆತಂಕಿರಾದ ಹೆತ್ತವರು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅನುಷ್ಕಾ ಪಿಯುಸಿ ವಿದ್ಯಾಭ್ಯಾಸದ ಬಳಿಕ ಮನೆಯಲ್ಲೇ ಇದ್ದು ಆನ್ ಲೈನ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಳು. ಈ ವೇಳೆ ಶಾಮನಿಸಂ ಎಂಬ ಅಧ್ಯಾತ್ಮ ವಿಭಾಗದ ಬಗ್ಗೆ ಆಕರ್ಷಿತಳಾಗಿದ್ದಾಳು. ಸದಾ ಶಾಮನಿಸಂ ಬಗ್ಗೆ ಇರುವ ವೀಡಿಯೋ, ವೆಬ್ ಸೈಟ್ ಗಳನ್ನು ತೆರೆದು ಅಧ್ಯಯನ ನಡೆಸುತ್ತಿದ್ದ ಅನುಷ್ಕಾ ಅಕ್ಟೋಬರ್ 31ರಂದು ಮನೆ ತೊರೆದಿದ್ದಾಳೆ. ಹೆತ್ತವರು ಮರುದಿನವೇ ಸ್ಥಳೀಯ ಪೊಲೀಸರಿಗೆ ನೀಡಿ ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣ, ಟ್ವಿಟರ್ ಗಳಲ್ಲಿಯೂ ತಮ್ಮ ಮಗಳು ಎಲ್ಲಾದರೂ ಕಂಡುಬಂದರೆ ತಿಳಿಸಿಕೊಡುವಂತೆ ಪೋಸ್ಟ್ ಮಾಡಿದ್ದಾರೆ. ಆದರೆ ಈವರೆಗೆ ಆಕೆಯ ಸುಳಿವು ಪತ್ತೆಯಾಗಿಲ್ಲ. ಈಕೆ ಶಾಮನಿಸಂ ಎಂಬ ಪುರಾತನ ಧಾರ್ಮಿಕ ಆಚಾರದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಕಾಣೆಯಾಗಿರಬಹುದು ಎಂದು ಪೊಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಮನಿಸಂ ಎಂದರೇನು?
ಶಾಮನಿಸಂ ಎಂಬುದು ಪುರಾತನ ಧಾರ್ಮಿಕ ಆಚರಣೆಯಾಗಿದ್ದು, ಇದನ್ನು ಅಭ್ಯಾಸ ಮಾಡಿದವರು ಆತ್ಮಗಳೊಂದಿಗೆ ಸಂಹವಹನ ಮಾಡಬಹುದು. ಅಲ್ಲದೆ ಅಧ್ಯಾತ್ಮ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವ ತಂತ್ರ ಎಂಬ ನಂಬಿಕೆಯಿದೆ. ಇದು ಆತ್ಮಗಳ ಪ್ರಪಂಚದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಪ್ರಾಚೀನ ಅಭ್ಯಾಸವಾಗಿದೆ.