ದಾನಿಗಳ ಸಹಕಾರದಲ್ಲಿ ನಿರ್ಮಾಣವಾಯಿತು ನಾಗಮ್ಮಜ್ಜಿಗೆ ನೂತನ ಮನೆ- ಬಡಕುಟುಂಬದ ಸಂಭ್ರಮಕ್ಕೆ ಕಾರಣವಾಯಿತು ಗೃಹಪ್ರವೇಶ ಕಾರ್ಯಕ್ರಮ
Monday, December 27, 2021
ಅದೊಂದು ಬಡ ಕುಟುಂಬ. ಬೀಳುವ ಹಂತದಲ್ಲಿದ್ದ ಮನೆಯೊಂದರಲ್ಲಿ ಆ ಕುಟುಂಬ ವಾಸ್ತವ್ಯ ಮಾಡುತಿತ್ತು. ಯಾವ ಕ್ಷಣದಲ್ಲಿ ಮನೆ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲೇ ಇದ್ದ ಆ ಕುಟುಂಬಕ್ಕೆ ಇದೀಗ ಸಮಾಜವೇ ಒಗ್ಗಟ್ಟಾಗಿ ಕೈ ಹಿಡಿದಿದೆ. ಹಲವರ ಸಹಕಾರದಲ್ಲಿ ನೂತನ ಮನೆ ಸಿದ್ದವಾಗಿ ಗೃಹಪ್ರವೇಶ ಕಾರ್ಯಕ್ರಮವೂ ನಡೆದಿದೆ.
ಹೌದು..ಅದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನಾಗಮ್ಮಜ್ಜಿ ಎಂಬವರ ಬಡ ಕುಟುಂಬ. ಕುಸಿಯುವ ಹಂತದ ಛಾವಣಿ,ಬಿರುಕುಬಿಟ್ಟ ಮಣ್ಣಿನ ಗೋಡೆಯ ಮನೆಯಲ್ಲಿ ಈ ನಾಗಮ್ಮಜ್ಜಿಯ ಬಡ ಕುಟುಂಬ ವಾಸ್ತವ್ಯವಿತ್ತು. ನಾಗಮ್ಮಜ್ಜಿ ಸೇರಿದಂತೆ ಐವರು ಇಲ್ಲಿ ವಾಸ್ತವ್ಯ ಮಾಡುತ್ತಿದ್ದರು ಮನೆ ಮಗ ಜವಬ್ದಾರಿ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ ನಾಗಮ್ಮಜ್ಜಿ ಮನೆಗೆ ಆಧಾರ ಬೇಕು ಎಂದು ನಿಮ್ಮ ವಿಜಯವಾಣಿಯಲ್ಲಿ ವಿಶೇಷ ವರದಿಯೊಂದು ಪ್ರಕಟವಾಗಿತ್ತು. ಈ ವರದಿಗೆ ಸ್ಪಂದಿಸಿದ ಸಂಘ ಸಂಸ್ಥೆಗಳು, ದಾನಿಗಳು ಇದೀಗ ನಾಗಮ್ಮಜ್ಜಿಗೆ ಸುಸಜ್ಜಿತ ಮನೆಯೊಂದನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಈ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮವೂ ಸಹ ಸಂಭ್ರಮದಲ್ಲಿ ನಡೆಯಿತು. ನಾಗಮ್ಮಜ್ಜಿಗೆ ಮನೆ ಕಟ್ಟೋಣ ಅಭಿಯಾನ ಮನೆ ನಿರ್ಮಾಣವಾಗಿ ಗೃಹಪ್ರವೇಶ ಕಾರ್ಯಕ್ರಮದ ಮೂಲಕ ಯಶಸ್ವಿಯಾಯಿತು.
ಸಂಘಸಂಸ್ಥೆ, ದಾನಿಗಳ ಜೊತೆ ವಿಜಯವಾಣಿ ಬಳಗವೂ ಮನೆ ನಿರ್ಮಾಣಕ್ಕೆ ಹೆಗಲು ನೀಡಿತು. ಸಂಘಸಂಸ್ಥೆಗಳ ಸದಸ್ಯರ ಶ್ರಮದಾನದಿಂದ ಆರು ತಿಂಗಳಲ್ಲಿ ಸುಂದರ ಮನೆ ನಿರ್ಮಾಣವಾಯಿತು. ಸ್ಥಳೀಯ ಸಿವಿಲ್ ಗುತ್ತಿಗೆದಾರ ಅಶ್ವಿನ್ ಮುಂಡಾಜೆ ಮನೆಯ ಪಂಚಾಂಗ, ಗೋಡೆ ಉಚಿತವಾಗಿ ನಿರ್ಮಿಸಿಕೊಟ್ಟರು. ಬಳಿಕ ರಿಯಾಯಿತಿ ದರದಲ್ಲಿ ಉಳಿದ ಕೆಲಸ ನಿರ್ವಹಿಸಿದರು. ದಾನಿಗಳು ಆರ್ಥಿಕವಾಗಿಯು ಸಹಕಾರ ನೀಡಿದರು. ಹೀಗಾಗಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ಎಲ್ಲರನ್ನು ಗೌರವಿಸಲಾಯಿತು. ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಗೃಹಪ್ರವೇಶ ಕಾರ್ಯಕ್ರಮ ನೆರವೇರಿಸಲಾಯಿತು.ಈ ನಡುವೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಸಹ ಇದೇ ಸಂದರ್ಭದಲ್ಲಿ ನೀಡಲಾಯಿತು.
ಒಟ್ಟಿನಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ನಾಗಮ್ಮಜ್ಜಿಗೆ ಸುಸಜ್ಜಿತ ಮನೆ ನಿರ್ಮಾಣ ಮೂಲಕ ಮತ್ತೆ ಸಾಭಿತಾಗಿದೆ. ಈ ಮೂಲಕ ಯಾವ ಕ್ಷಣದಲ್ಲಿಯೂ ಮನೆ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿಯೇ ಇದ್ದ ಬಡ ಕುಟುಂಬ ನೆಮ್ಮದಿಯ ಜೀವನ ನಡೆಸುವಂತಾಗಿದೆ.