ಪತ್ನಿಗೆ ಐಷಾರಾಮಿ ಜೀವನದ ಗೀಳು: ಈಡೇರಿಸಲಾಗದೆ ಸಾವಿಗೆ ಶರಣಾದ ಪತಿ
Tuesday, January 25, 2022
ಬೆಂಗಳೂರು : ಅವನ ಸಾಂಸಾರಿಕ ಜೀವನ ಚೆನ್ನಾಗಿಲ್ಲ ಅಂತ ಮೊದಲನೇ ಹೆಂಡತಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದ. ಆದ್ರೆ ಅಲ್ಲೂ ನೆಮ್ಮದಿ ಸಿಗದಿದ್ದಾಗ ಆತ್ಮಹತ್ಯೆಗೆ ಶರಣಾದ. ಈ ಘಟನೆ ನಡೆದದ್ದು ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದ 6ನೇ ಕ್ರಾಸ್‌ನಲ್ಲಿ.
ಹೌದು ಈ ನತದೃಷ್ಟ ವ್ಯಕ್ತಿಯ ಹೆಸರು ಚಾಂದ್ ಪಾಷಾ. ಕಳೆದ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗ್ಯಾರೇಜ್ ಒಂದರಲ್ಲಿ ಮೆಕಾನಿಕ್ ವೃತ್ತಿ ಮಾಡಿಕೊಂಡಿದ್ದ ಈತ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಆದ್ರೆ ಸಾಂಸಾರಿಕ ಜೀವನ ಸರಿ ಹೋಗ್ತಾ ಇಲ್ಲ ಅಂತ ಆಕೆಗೆ ವಿಚ್ಛೇದನ ನೀಡಿ ಕಳೆದ ನಾಲ್ಕು ತಿಂಗಳ ಹಿಂದೆ ಉಸ್ಮಾ ಎಂಬಾಕೆಯನ್ನು ಮತ್ತೊಂದು ಮದುವೆಯಾಗಿದ್ದ. ಆಕೆಗೋ ಇದು ಎರಡನೇ ವಿವಾಹವಾಗಿತ್ತು. ಎರಡನೇ ಬಾರಿಗೆ ಇಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದರು.
ಆದರೆ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಸಾಂಸಾರಿಕ ಭಿನ್ನಾಭಿಪ್ರಾಯ ಶುರುವಾಯಿತು. ಪತ್ನಿ ಉಸ್ನಾಗೆ ಐಷಾರಾಮಿ ಜೀವನದ ಗೀಳು, ದಿನವೂ ಹೊರಗೆ ಸುತ್ತಾಡಬೇಕು ಎನ್ನುವ ಬಯಕೆ. ದುಬಾರಿ ಬಟ್ಟೆ ಧರಿಸಬೇಕು, ಚಿನ್ನಾಭರಣ ಬೇಕೆನ್ನುವ ಹುಚ್ಚು. ಆದರೆ ಮೆಕ್ಯಾನಿಕ್ ಆಗಿದ್ದ ಪತಿ ಚಾಂದ್ ಪಾಷಾಗೆ ಹೆಂಡತಿಯ ಬಯಕೆ ಈಡೇರಿಸಲು ಕಷ್ಟವಾಗಿತ್ತು.ಇದೇ ವಿಚಾರಕ್ಕೆ ದಿನ ನಿತ್ಯ ಗಂಡ ಹೆಂಡತಿ ನಡುವೆ ಕಲಹ ನಡೆಯುತ್ತಿತ್ತು. ಇದ್ರಿಂದ ಬೇಸತ್ತ ಚಾಂದ್ ಪಾಷಾ ಕಳೆದ ರಾತ್ರಿ ತನ್ನ ಮನೆಯಲ್ಲೆ ನೇಣಿಗೆ ಕೊರಳೊಡ್ಡಿದ್ದಾನೆ.ಆತ್ಮಹತ್ಯೆ ಕುರಿತು ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.