ಐಸಿಸ್ ಸಂಪರ್ಕ ಶಂಕೆಯಲ್ಲಿ ಮಂಗಳೂರಿನ ದೀಪ್ತಿ ಅಲಿಯಾಸ್ ಮರಿಯಂ NIA ವಶಕ್ಕೆ
Monday, January 3, 2022
ಮಂಗಳೂರು: ಉಳ್ಳಾಲದ ಮಾಜಿ ಎಂಎಲ್ಎ ಬಿ.ಎಂ.ಇದಿನಬ್ಬ ಪುತ್ರ ಬಿ.ಎಂ.ಬಾಷಾ ಮನೆಗೆ ಮತ್ತೆ ಎನ್‌ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂಳನ್ನು ಐಸಿಸ್ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿ ವಿಭಾಗದ ಎನ್‌ಐಎ ಡಿಎಸ್ಪಿ ಕೃಷ್ಣ ಕುಮಾರ್ ನೇತೃತ್ವದಲ್ಲಿ, ಇನ್ ಸ್ಪೆಕ್ಟರ್ ಅಜಯ್ ಸಿಂಗ್, ಮೋನಿಕಾ ಧಿಕ್ವಾಲ್ ಅಧಿಕಾರಿಗಳ ತಂಡವು ಇಂದು ಬೆಳಗ್ಗೆ ಮತ್ತೆ ಇದಿನಬ್ಬ ಮನೆಗೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಬಿ.ಎಂ.ಬಾಷಾ ಸೊಸೆ ದೀಪ್ತಿ ಅಲಿಯಾಸ್ ಮರಿಯಂಳನ್ನು ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಅಧಿಕಾರಿಗಳು ಆಕೆಯನ್ನು ಮಧ್ಯಾಹ್ನ 3 ಗಂಟೆಗೆ ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆ ಬಳಿಕ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಮುಂದೆ ಆಕೆಯನ್ನು ಹಾಜರುಪಡಿಸಿದ್ದಾರೆ. ಅಲ್ಲಿಂದ ಎನ್ಐಎ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆಂದು ಮರಿಯಂಳನ್ನು ದೆಹಲಿಗೆ ಕರೆದೊಯ್ಯಲಿದ್ದಾರೆ.
ಕೊಡಗು ಮೂಲದ ದೀಪ್ತಿ ಮಾರ್ಲ ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಕಲಿಯುತ್ತಿದ್ದ ಸಂದರ್ಭದ ಬಿಎಂ ಬಾಷಾ ಪುತ್ರ ಅನಾಸ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಸಂದರ್ಭ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಕಟ್ಟರ್ ಮುಸ್ಲಿಂ ಧರ್ಮೀಯಳಾಗಿದ್ದರು. ಹಾಗೆಯೇ ಆಕೆ ತನ್ನ ಹೆಸರನ್ನು ದೀಪ್ತಿ ಎಂದಿರುವುದನ್ನು ಬದಲಿಸಿ ಮರಿಯಂ ಎಂದು ಇರಿಸಿಕೊಂಡಿದ್ದಳು.
ಎನ್‌ಐಎ ಅಧಿಕಾರಿಗಳು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ.ಬಾಷಾ ಮನೆಗೆ ಕಳೆದ ಆಗಸ್ಟ್ 4ರಂದು ದಾಳಿ ನಡೆಸಿದ್ದರು. ಈ ಸಂದರ್ಭ ಬಾಷಾ ಕಿರಿಯ ಪುತ್ರ ಅಮ್ಮರ್ ಅಬ್ದುಲ್ ರೆಹಮಾನ್ ನನ್ನು ಬಂಧಿಸಿದ್ದರು. ಈ ಸಂದರ್ಭ ದೀಪ್ತಿ ಅಲಿಯಾಸ್ ಮರಿಯಂಳನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಬಿಟ್ಟಿದ್ದರು.
ಇದೀಗ ಆಕೆ ಉಗ್ರವಾದಿ ಸಂಘಟನೆ ಐಸಿಸ್ ಸಂಪರ್ಕ ಪಡೆದಿದ್ದು ಜಮ್ಮು ಕಾಶ್ಮೀರದ ಲಿಂಕ್ ಹೊಂದಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಈಕೆ ಮಂಗಳೂರಿನಲ್ಲಿ ಇದ್ದುಕೊಂಡೇ ಯುವಕರನ್ನು ಐಸಿಸ್ ಜಾಲಕ್ಕೆ ಸೆಳೆಯುವ ಕೃತ್ಯದಲ್ಲಿ ಭಾಗಿಯಾಗಿದ್ದಾಳೆ ಎನ್ನುವ ಬಲವಾದ ಆಧಾರದಲ್ಲಿ ಇದೀಗ ಮತ್ತೆ ಮನೆಗೆ ಎನ್ಐಎ ದಾಳಿ ನಡೆಸಿ, ಮರಿಯಂಳನ್ನು ವಶಕ್ಕೆ ಪಡೆದಿದೆ.