ಮಂಗಳೂರು: Online ಸಾಲದ ಶೂಲಕ್ಕೆ ಯುವಕ ಬಲಿ
Monday, January 10, 2022
ಮಂಗಳೂರು: ಆನ್ ಲೈನ್ ಕ್ರೆಡಿಟ್ ಅಪ್ಲಿಕೇಶನ್ ಗಳ ಮೂಲಕ ಸಾಲ ಪಡೆದುಕೊಂಡಿದ್ದ ಯುವಕನೋರ್ವನು ಅದನ್ನು ತೀರಿಸಲಾಗದೆ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ಸುಶಾಂತ್(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಸುಶಾಂತ್ ಸುರತ್ಕಲ್ ನಲ್ಲಿರುವ ಕುಳಾಯಿಯ ತನ್ನ ಸನ್ ರೈಸ್ ಕಾರ್ಪೊರೇಷನ್ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರ ತಂದೆ - ತಾಯಿ 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಇದೀಗ ಅವರು ತಮ್ಮ ಅಣ್ಣ ಅಶ್ವಿತ್ (31) ರೊಂದಿಗೆ ವಾಸಿಸುತ್ತಿದ್ದರು.
ಇದೀಗ ಸುಶಾಂತ್ ತಾವು ತೆಗೆದುಕೊಂಡ ಸಾಲ ತೀರಿಸಲಾಗದೆ ಕಚೇರಿಯೊಳಗೆ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಚೇರಿ ಬಾಗಿಲನ್ನು ಹ್ಯಾಕ್ಸೊ ಬ್ಲೇಡ್ ನಿಂದ ತುಂಡರಿಸಿ ಕಚೇರಿಯೊಳಗೆ ಹೋಗಿದ್ದಾರೆ. ಸುಶಾಂತ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ' ಕ್ಷಮಿಸಿ ನನಗೆ ಎಲ್ಲರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಣದ ವಿಚಾರದಲ್ಲಿ ತೊಂದರೆಯಾಯಿತು. ಆನ್ಲೈನ್ ಸಾಲ ನೀಡಿದವರು ಕರೆ ಮಾಡಿದರೆ ಮೃತಪಟ್ಟಿದ್ದೇನೆಂದು ಹೇಳಿ' ಎಂದು ಬರೆದಿದ್ದಾರೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.