ಮಂಗಳೂರು: ಆರೋಗ್ಯ ಕಾರ್ಯಕರ್ತರು,ಮುಂಚೂಣಿ ಕಾರ್ಯಕರ್ತರು, ಹಿರಿಯರು ಸೇರಿ 3.37 ಲಕ್ಷ ಮಂದಿಗೆ Booster Dose ;ಸಚಿವ ಅಂಗಾರ ಚಾಲನೆ
Monday, January 10, 2022
ಮಂಗಳೂರು: 52,529 ಆರೋಗ್ಯ ಕಾರ್ಯಕರ್ತರು, 15,924 ಮಂಚೂಣಿ ಕಾರ್ಯಕರ್ತರು ಹಾಗೂ 2,69,000 ಅರವತ್ತು ವರ್ಷ ಮೇಲ್ಪಟ್ಟವರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ
3,37,447 ಅರ್ಹ ಫಲಾನುಭವಿಗಳ ಪೈಕಿ 40 ಸಾವಿರ ಜನರಿಗೆ ಇಂದು ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಅವರು ತಿಳಿಸಿದರು.
ನಗರದ ವೆನ್ ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಆಸ್ಪತ್ರೆಯಲ್ಲಿ ಕೋವಿಡ್ ನ ಬೂಸ್ಟರ್ ಡೋಸ್ ನೀಡಿಕೆಯಲ್ಲಿ ಉಪಸ್ಥಿತರಿದ್ದು ಡೋಸ್ ಪಡೆದವರಿಗೆ ಶುಭಹಾರೈಸಿ ಮಾತನಾಡಿದರು.
ಅರ್ಹ ಫಲಾನುಭವಿಗಳು ಬೇಗನೆ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು, ಸರ್ಕಾರದಿಂದ ಈಗಾಗಲೇ ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಆರೋಗ್ಯ ಹಾಗೂ ಜೀವರಕ್ಷಣೆ ಇದರಿಂದ ಸಾಧ್ಯವಾಗಲಿದೆ, ಕೋವಿಡ್ ಸೋಂಕಿನ ನಿಯಂತ್ರಣದ ಹಿತ ದೃಷ್ಟಿಯಿಂದ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು, ಕೋವಿಡ್ ಕುರಿತಂತೆ ನಾಗರೀಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ, ಮುಖ್ಯವಾಗಿ ಅಜಾಗರೂಕರಾಗಿರಬಾರದು, ಲಾಕ್ಡೌನ್ ಗೆ ಸಂಬಂಧಿಸಿದಂತೆ ಜನರಲ್ಲಿ ಗೊಂದಲಗಳಿವೆ, ಸೋಂಕು ನಿಯಂತ್ರಿಸುವಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದಲ್ಲಿ ಅನುಕೂಲ ಎಂಬ ಕಾರಣದಿಂದ ವಾರಂತ್ಯ ಕಫ್ರ್ಯೂ ವಿಧಿಸಲಾಗಿದೆ, ಜನ ಎಚ್ಚರಿಕೆ ವಹಿಸಿದರೆ ಲಾಕ್ಡೌನ್ ಹೇರುವ ಪ್ರಮೇಯ ಉದ್ಬವಿಸುವುದಿಲ್ಲ ಎಂದು ಅವರು ಹೇಳಿದರು.