ರೋಪ್ ವೇ ಮೂಲಕ ವಸ್ತುಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ SHIFT- ಕಾರ್ಮಿಕರ ಕೊರತೆ, ಸಮಯ, ದೈಹಿಕ ಶ್ರಮ ವ್ಯರ್ಥಕ್ಕೆ ಬ್ರೇಕ್ ಹಾಕಲು ರೋಪ್ ವೇ ಸಿದ್ಧಪಡಿಸಿದ ಕಾಸರಗೋಡಿನ ಕೃಷಿಕ.
Wednesday, January 5, 2022
ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆ ಭೌಗೋಳಿಕವಾಗಿ ಏರು ತಗ್ಗಿನಿಂದ ಕೂಡಿದ ಪ್ರದೇಶಗಳು. ಇಲ್ಲಿನ ಹೆಚ್ಚಿನ ಕೃಷಿಕರ ಮನೆ ಮತ್ತು ಅಂಗಳ ಎತ್ತರದಲ್ಲಿದ್ದರೆ, ಕೃಷಿ ತೋಟವಿರುವುದು ಮೂವತ್ತೋ ನಲವತ್ತೋ ಅಡಿ ಕೆಲಭಾಗದಲ್ಲಿ. ಕೃಷಿ ತೋಟಕ್ಕೆ ಬೇಕಾದ ಗೊಬ್ಬರ ಇತ್ಯಾದಿ ಮೇಲಿನಿಂದ ಕೆಳಕ್ಕೆ ಹೊರುವ ಕಷ್ಟ ಒಂದೆಡೆಯಾದರೆ, ಕೃಷಿ ಉತ್ಪನ್ನಗಳನ್ನು ಕೆಳಗಿನ ತೋಟದಿಂದ ಮನೆಯೆದುರಿನ ಅಂಗಳಕ್ಕೆ ತರುವ, ಹೊರುವ ಕೆಲಸ ತ್ರಾಸದಾಯಕ ಮತ್ತು ಕಷ್ಟಕರ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಇಲ್ಲೊಬ್ಬರು ರೈತರು ಯಶಸ್ವಿಯಾಗಿದ್ದಾರೆ.
ಹೌದು..ತೋಟದಲ್ಲಿ ಬೆಳೆದ ಬೆಳೆ ಅಂಗಳಕ್ಕೆ ಬರಬೇಕಾದರೆ ಸಾಕಷ್ಟು ಶ್ರಮ ಬೇಕೇ ಬೇಕು. ಅಡಿಕೆ ಕೊಯಿಲಿನ ಸಮಯದಲ್ಲಿ ಮತ್ತು ತೆಂಗಿನಕಾಯಿ ಕೊಯ್ದು ಅಂಗಳಕ್ಕೆ ತರುವಾಗ ಕೆಲಸದಾಳುಗಳ ಜೊತೆಗೆ ಯಜಮಾನನೂ ಕಷ್ಟಪಡಬೇಕಾಗುವುದು ಸಾಮಾನ್ಯ ಸಂಗತಿಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಕಾಸರಗೋಡಿನ ಪೆರ್ಲದ ಪ್ರಗತಿಪರ ಕೃಷಿಕ ಶ್ರೀಹರಿ ಭಟ್ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ರೋಪ್ ವೇ ಮೂಲಕ ಕೃಷಿ ಉತ್ಪನ್ನ ಮತ್ತು ಗೊಬ್ಬರಗಳನ್ನು ಕೃಷಿತೋಟಕ್ಕೆ ಸಾಗಿಸುವ ಸಾಧನವೊಂದನ್ನು ರೆಡಿ ಮಾಡಿದ್ದಾರೆ. ಮನೆಯಿಂದ ನೇರವಾಗಿ ಕೃಷಿತೋಟಕ್ಕೆ ಹಾಗೂ ಕೃಷಿತೋಟದಿಂದ ನೇರವಾಗಿ ಮನೆಗೆ ಸಂಪರ್ಕ ಕಲ್ಪಿಸುವ ರೋಪ್ ವೇ ಒಂದನ್ನು ಶ್ರೀಹರಿ ಭಟ್ ಅಳವಡಿಸಿಕೊಂಡಿದ್ದು, 50 ಕಿಲೋಗಿಂತಲೂ ಮಿಕ್ಕಿದ ಸಾಮಾಗ್ರಿಗಳನ್ನು ಈ ರೋಪ್ ವೇ ಮೂಲಕ ಅನಾಯಾಸವಾಗಿ ಸಾಗಿಸಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀಹರಿ ಭಟ್ ಅವರ ಮನೆ ಕೃಷಿ ತೋಟದಿಂದ ಸುಮಾರು 40 ಅಡಿ ಎತ್ತರದಲ್ಲಿದ್ದು, ಕೃಷಿ ಉತ್ಪನ್ನಗಳನ್ನು ಹಾಗೂ ತೋಟಗಳಿಗೆ ಹಾಕಬೇಕಾದ ಗೊಬ್ಬರಗಳನ್ನು ಹೊತ್ತುಕೊಂಡೇ ಸಾಗಿಸಬೇಕಾದ ಅನಿವಾರ್ಯತೆಯಿತ್ತು. ಈ ಕೆಲಸಕ್ಕಾಗಿಯೇ ಸಾಕಷ್ಟು ಹಣ ಹಾಗೂ ಸಮಯ ಪೋಲಾಗುತ್ತಿರುವುದನ್ನು ಮನಗಂಡ ಶ್ರೀಹರಿ ಭಟ್ ಈ ಸಾಧನವನ್ನು ಅಳವಡಿಸಿದ್ದಾರೆ. ಈ ವಿಧಾನ ಅಳವಡಿಸಲು ಎರಡು ರಾಟೆ ಮತ್ತು ಕ್ಲಾಂಪ್‌ಗಳನ್ನು ಬಳಸಿಕೊಂಡಿದ್ದಾರೆ. ಜೊತೆಗೆ ಮನೆಯ ಅಂಗಳದಲ್ಲಿ ಒಂಭತ್ತು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಕಬ್ಬಿಣದ ಗಟ್ಟಿ ಸಲಾಕೆ. ಇನ್ನೊಂದು ಸುಮಾರು ಐವತ್ತು ಅಡಿ ತಗ್ಗಿನಲ್ಲಿ ಇರುವ ತೋಟದಲ್ಲಿ ಏಳು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಗಟ್ಟಿ ಸಲಾಕೆ. ಇವೆರಡರ ನಡುವೆ 8 MM ದಪ್ಪದ ಕಬ್ಬಿಣದ ಕೇಬಲ್ ಎಳೆದು ಕಟ್ಟಿ, ಅದರ ಮೇಲೆ ಚಲಿಸುವ ರಾಟೆ ಅಳವಡಿಸಿದ್ದಾರೆ. ಕೇಬಲ್ ಮೇಲೆ ಚಲಿಸುವ ರಾಟೆ ಇದ್ದರೆ ಅಂಗಳದ ಕಂಬದ ಬಳಿ ಸ್ಥಿರ ರಾಟೆ ಅಳವಡಿಸಿ ನೈಲಾನ್ ಹಗ್ಗ ಅಳವಡಿಸಲಾಗಿದೆ. ಸ್ಥಿರ ರಾಟೆ ಯಿಂದ ಕೇಬಲ್ ಮೇಲಿನ ರಾಟೆ ಎಳೆಯಲು ಸಂಪರ್ಕ ಕೊಡಲಾಗಿದೆ.
ತೋಟದ ಮೂಲೆ ಮೂಲೆ ತಲುಪುವ ಎರಡು ಚಕ್ರದ ಮಾನವ ಚಾಲಿತ ಕೈಗಾಡಿಯಿದ್ದು ಅಡಿಕೆಯನ್ನು ಸಂಗ್ರಹಿಸಿ ರೋಪ್ ವೇ ಇರುವ ಜಾಗದಲ್ಲಿ ಶೇಖರಿಸಲಾಗುತ್ತದೆ. ಹೀಗೆ ಶೇಖರಿಸಿದ ಕೃಷಿ ಉತ್ಪನ್ನಗಳನ್ನು ಗೋಣಿ ಚೀಲದಲ್ಲಿ ತುಂಬಿ ನೇರವಾಗಿ ಮನೆಯ ಅಂಗಳದಲ್ಲಿ ಡಂಪ್ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಒಟ್ಟಿನಲ್ಲಿ ಈ ಸಾಧನ ಕೃಷಿಕನ ತಲೆಯ ಮೇಲಿನ ಹೊರೆಯ ಜೊತೆಗೆ ತಲೆಯೊಳಗಿನ ಭಾರವನ್ನೂ ಹಗುರಾಗಿಸಿದೆ.