Mangalore: ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬೆಲೆಬಾಳುವ ವಜ್ರದ ಬಳೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Wednesday, February 2, 2022
ಮಂಗಳೂರು: ಲಕ್ಷಾಂತರ ರೂ ಬೆಲೆಬಾಳುವ ವಜ್ರದ ಬಳೆಯನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣದ ಟ್ರಾಲಿ ರಿಟ್ರೀವರ್ ಸಿಬ್ಬಂದಿ ಅಶ್ರಫ್ ಮೊಯ್ದೀನ್ ವಜ್ರದ ಬಳೆಯನ್ನು ಭದ್ರತಾ ತಂಡದ ಮೂಲಕ ವಾಪಸ್ ಮಾಡಿ ಪ್ರಾಮಾಣಿಕತೆ ಮೆರೆದವರು.
ಬೆಂಗಳೂರಿನಿಂದ ಮಂಗಳೂರಿಗೆ ಸಂಬಂಧಿಯನ್ನು ಕರೆದೊಯ್ಯಲು ಬಂದಿದ್ದ ಮಹಿಳೆ ಏರ್ ಪೋರ್ಟ್ ನಲ್ಲಿ ತನ್ನ ವಜ್ರದ ಬಳೆಯನ್ನು ಕಳೆದುಕೊಂಡಿದ್ದರು. ವಿಮಾನ ನಿಲ್ದಾಣದಿಂದ ತೆರಳಿದ ಬಳಿಕ ಬಳೆ ಕಳೆದುಕೊಂಡಿರುವುದು ಮಹಿಳೆಯ ಗಮನಕ್ಕೆ ಬಂದಿತ್ತು. ತಕ್ಷಣ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಗೆ ಮಾಹಿತಿ ನೀಡಲಾಗಿತ್ತು.
ಟರ್ಮಿನಲ್ ಕೆಳ ಮಹಡಿಯ ನಿರ್ಗಮನ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಶ್ರಫ್ ಮೊಯ್ದೀನ್ ಗೆ ಈ ವಜ್ರದ ಬಳೆ ದೊರಕಿತ್ತು. ತಕ್ಷಣ ಅವರು ಈ ಬೆಲೆಬಾಳುವ ಬಳೆಯನ್ನು ಭದ್ರತಾ ತಂಡದ ಮೂಲಕ ಮಹಿಳೆಗೆ ಹಸ್ತಾಂತರ ಮಾಡಿದ್ದಾರೆ.
ಅಶ್ರಫ್ ಮೊಯ್ದೀನ್ ಪ್ರಯಾಣಿಕರಿಗೆ ಸಂಬಂಧಿಸಿದ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಎರಡನೇ ಘಟನೆ ಇದಾಗಿದ್ದು ಇವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಮಹಿಳೆ ಅಶ್ರಫ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.