ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ಎಎಸ್ಐ ಉಮೇಶಯ್ಯನಿಗೆ ಇಪ್ಪತ್ತು ವರ್ಷ ಜೈಲು
Tuesday, February 1, 2022
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ತುಮಕೂರಿನಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಅಂತಿಮ ಆದೇಶ ಪ್ರಕಟವಾಗಿದೆ. ಅಪರಾಧಿಗೆ ಇಪ್ಪತ್ತು ವರ್ಷ ಕಠಿಣ ಜೈಲು ಶಿಕ್ಷೆ ಒಂದು ಲಕ್ಷ ರೂ.ದಂಡ ವಿಧಿಸಿ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪನ್ನು ಹೊರಡಿಸಿದೆ.
2017 ರ ಜನವರಿ ಹದಿನೈದರಂದು ಬುದ್ಧಿಮಾಂದ್ಯ ಯುವತಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟ ಗೊಂಡಿದೆ. ಮೊನ್ನೆ ಅಪರಾಧಿಯೆಂದು ಕೋರ್ಟ್ ತೀರ್ಪು ನೀಡಿತ್ತು ಇವತ್ತು ಅಪರಾಧಿಗೆ ಇಪ್ಪತ್ತು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ.ದಂಡ ವಿಧಿಸಿ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಘಟನೆ ವಿವರ
ಕಳೆದ 2017 ಜನವರಿ ಹದಿನೇಳುರಂದು ತುಮಕೂರಿನ ನಿವಾಸಿಯಾಗಿದ್ದ ಬುದ್ಧಿಮಾಂದ್ಯ ಯುವತಿ ತಮ್ಮ ಮನೆಯಿಂದ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದು ಈ ವೇಳೆ ದೇವಸ್ಥಾನದಲ್ಲಿ ಕುಸಿದುಬಿದ್ದಿದ್ದಳು. ಮಧ್ಯರಾತ್ರಿ ಎಚ್ಚರಗೊಂಡ ಬಳಿಕ ತಮ್ಮ ಮನೆಗೆ ಹೋಗಲು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಾ ಇರುವಾಗ ಕರ್ತವ್ಯನಿರತರಾಗಿದ್ದ ತುಮಕೂರು ಎ ಎಸ್ ಐ ಉಮೇಶಯ್ಯ ಒಬ್ಬಂಟಿಯಾಗಿದ್ದ ಯುವತಿಯನ್ನ ಮನೆಗೆ ಡ್ರಾಪ್ ಕೊಡುವುದಾಗಿ ಖಾಸಗಿ ಬೊಲೆರೋ ಜೀಪ್ ನಲ್ಲಿ ಕರೆದೊಯ್ದ ಬೆಳಗ್ಗಿನ ಜಾವದವರೆಗೂ ಜೀಪಿನಲ್ಲಿ ತುಮಕೂರಿನ ಹಲವು ಕಡೆ ಸುತ್ತಾಡಿ ಅತ್ಯಾಚಾರ ಎಸಗಿ ಕೊನೆಗೆ ನೃಪತುಂಗ ರಸ್ತೆಯಲ್ಲಿ ಯುವತಿಯನ್ನು ಬಿಟ್ಟು ಹೋಗಿದ್ದ.ಸಂತ್ರಸ್ತ ಯುವತಿ ತಮ್ಮ ಪೋಷಕರಿಗೆ ಅತ್ಯಾಚಾರದ ಬಗ್ಗೆ ಮಾಹಿತಿ ತಿಳಿಸಿದ್ದರು. ಈ ಸಂಬಂಧ ಸಂತ್ರಸ್ತ ಯುವತಿಯ ಪೋಷಕರು ತುಮಕೂರು ಮಹಿಳಾ ಠಾಣೆಯಲ್ಲಿ ಎಎಸ್ಐ ಉಮೇಶ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣ ರಾಷ್ಟ್ರ ವ್ಯಾಪ್ತಿಯಲ್ಲಿ ಭಾರಿ ಸದ್ದು ಮಾಡಿತ್ತು.
ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.ಸತತ 5ವರ್ಷಗಳಿಂದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಆರೋಪಿ ಎಎಸ್ಐ ಉಮೇಶ್ ಅಪರಾಧಿ ಎಂದು ಆದೇಶ ನೀಡಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟ ಗೊಂಡಿದೆ.
ಒಟ್ಟಿನಲ್ಲಿ ಜನರಿಗೆ ರಕ್ಷಣೆ ಕೊಡಬೇಕಾದ ಆರಕ್ಷಕ ಅಧಿಕಾರಿ ಕೀಚಕ ಕೃತ್ಯದಲ್ಲಿ ಭಾಗಿಯಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಪೋಲಿಸರ ಬಗ್ಗೆ ಮೊದಲೇ ಕೆಟ್ಟ ಅಭಿಪ್ರಾಯಗಳು ಇರುವಾಗ ಇದು ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ .