ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ.ಪರಿಹಾರ
Thursday, March 3, 2022
ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಯುವಕ ಹರ್ಷನ ಕುಟುಂಬಕ್ಕೆ ಸರ್ಕಾರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 25 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೃತ ಹರ್ಷನ ಮನೆಗೆ ಮಾ. 6 ರಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಪರಿಹಾರದ ಚೆಕ್ ವಿತರಿಸಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕೆಲವು ಮುಸ್ಲಿಂ ಗೂಂಡಾಗಳು ಈ ಹತ್ಯೆ ಮಾಡಿದ್ದಾರೆ ಎಂದು ಪುನರುಚ್ಛರಿಸಿದ ಅವರು, ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ, ಆದರೆ, ಹತ್ಯೆ ಮಾಡುವ ಗೂಂಡಾಗಳು ಮುಸ್ಲಿಮರಲ್ಲಿ ಹೆಚ್ಚು ಇದ್ದಾರೆ. ಈ ಹತ್ಯೆಯನ್ನು ಪಕ್ಷ ಭೇದ ಮರೆತು ಖಂಡಿಸಬೇಕು. ಮುಸ್ಲಿಂ ಮುಖಂಡರು ಕೂಡ ಇಂತಹ ಘಟನೆಗಳು ಸಂಭವಿಸಿದಾಗ ಎಚ್ಚರಿಕೆಯಿಂದಿರಬೇಕು ಎಂದರು.
ಕಾಂಗ್ರೆಸ್ ನಾಯಕರು ಮತ್ತು ಕೆಲವು ಮುಸ್ಲಿಂ ಮುಖಂಡರು ಕೆಲವು ವರ್ಷಗಳ ಹಿಂದೆ ಕೊಲೆಯಾದ ವಿಶ್ವನಾಥ್ ಶೆಟ್ಟಿ ಅವರ ಮನೆಗೆ ಹೋಗಿ ಸಾಂತ್ವನ ಹೇಳುತ್ತಿದ್ದಾರೆ. ನಮಗೂ ಕೂಡ ಅವರ ತಾಯಿ ಚಿಂದಿ ಆಯುತ್ತಿರುವ ವಿಷಯ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಗೊತ್ತಾಗಿದೆ. ಆದರೆ, ಬಿಜೆಪಿ ವಿಶ್ವನಾಥ್ ಹತ್ಯೆಯಾದಾಗ ಸುಮಾರು 18 ಲಕ್ಷ ರೂ. ಪರಿಹಾರ ನೀಡಿತ್ತು ಎಂದ ಅವರು ಈಗ ಕೆಲವರು ಇದನ್ನು ರಾಜಕೀಯಗೊಳಿಸಲು ಸಾಂತ್ವನ ಹೇಳುವ ನೆಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ ಮಾತನಾಡಲು ಬಿ.ಕೆ. ಹರಿಪ್ರಸಾದ್ ಯಾರು ಎಂದು ಪ್ರಶ್ನಿಸಿದ ಅವರು, ಅವರು ಹಿಂಬಾಗಿಲ ರಾಜಕಿಯ ಬಿಟ್ಟು ಯಾವುದಾದರೂ ತಾಪಂ ಕ್ಷೇತ್ರದಲ್ಲಿ ಟಿಕೆಟ್ ಪಡೆದು ಗೆದ್ದು ತೋರಿಸಲಿ, ಆ ಬಳಿಕ ನನ್ನ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.