ಮಂಗಳೂರು: ಯುಪಿ ಚುನಾವಣಾ ಫಲಿತಾಂಶ ಕರ್ನಾಟಕದ ಚುನಾವಣೆ ಮೇಲೂ ಪರಿಣಾಮ ಬೀರಲಿದೆ-ಡಿ.ವಿ ಸದಾನಂದ ಗೌಡ
Thursday, March 10, 2022
ಮಂಗಳೂರು: ಯುಪಿಯಲ್ಲಿ ಯೋಗಿ ಗೂಂಡಾ ರಾಜ್ಯವನ್ನು ಜನಸಾಮಾನ್ಯರ ರಾಜ್ಯವಾಗಿ ಪರಿವರ್ತನೆ ಮಾಡಿದ್ದಾರೆ. ಈ ಚುನಾವಣಾ ಫಲಿತಾಂಶವು ಕರ್ನಾಟಕ ರಾಜ್ಯ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಮೂವರು ಸಿಎಂ ಬದಲಾವಣೆಯಾದರೂ ಬಿಜೆಪಿ ಕರ್ನಾಟಕದಲ್ಲಿ ಅತೀ ದೊಡ್ಡ ಪಕ್ಷವಾಗಿದೆ. ಬಿಜೆಪಿಗೆ ಬೇರೆ ಬೇರೆ ಪಕ್ಷಗಳಿಂದಲೂ ಜನರು ಬರುತ್ತಿದ್ದಾರೆ. ಉತ್ತರಾಖಾಂಡದಲ್ಲಿ ಮೂವರು ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಈಗ ಉತ್ತರಾಖಾಂಡ್ ಫಲಿತಾಂಶ ಏನಾಗಿದೆ ಎಂದು ಪ್ರಶ್ನಿಸಿದರು.
ಪಂಚರಾಜ್ಯ ಚುನಾವಣೆಯ
ನಿರೀಕ್ಷೆಯಂತೇ ಫಲಿತಾಂಶ ಬರುತ್ತಿದೆ. ಸರ್ಕಾರ ಮಾಡಿರುವ ಕೆಲಸ ಕಾರ್ಯದ ಆಧಾರದಲ್ಲಿ ಜನರು ಮತ ನೀಡಿದ್ದಾರೆ. ಪಂಜಾಬ್ ನಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಅಕಾಲಿದಳ ಹಾಗೂ ಕಾಂಗ್ರೆಸ್ ಜಂಟಿಯಾಗಿ ಬಿಜೆಪಿಯ ವಿರುದ್ಧ ಗೂಬೆ ಕೂರಿಸಿದೆ. ಬಿಜೆಪಿ ಪಂಜಾಬ್ ನಲ್ಲಿ ನೆಲೆ ಊರದಂತೆ ಷಡ್ಯಂತ್ರ ರೂಪಿಸಿದ್ದರು.ಹೀಗಾಗಿ ಬಿಜೆಪಿ ಗೆ ಪಂಜಾಬ್ ನಲ್ಲಿ ಸ್ವಲ್ಪ ಹಿನ್ನಡೆ ಯಾಗಿದೆ.ಆದರೂ ಕಳೆದ ಬಾರಿಗಿಂತ ಪಂಜಾಬ್ ನಲ್ಲಿ ಬಿಜೆಪಿ ಸೀಟು ಅಧಿಕವಾಗಿದೆ. ಉಳಿದ ನಾಲ್ಕು ಕಡೆ ನಿರೀಕ್ಷೆ ಯಂತೆ ಫಲಿತಾಂಶ ಬರುತ್ತಿದೆ.ಕಾಂಗ್ರೆಸ್ ಈ ಹಿಂದೆಯೇ ಧೂಳಿಪಟವಾಗಿದೆ. ನರೇಂದ್ರ ಮೋದಿ ಆಡಳಿತ ವರ್ಚಸ್ಸಿನ ಎದುರು ಬೇರೆ ಯಾವ ಪಾರ್ಟಿಯೂ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಇಷ್ಟು ದಿನ ದೇಶ ಕೊಳ್ಳೆ ಹೊಡೆದಿತ್ತು. ಒಂದೇ ಕುಟುಂಬದವರು ರಾಜಕೀಯ ಮಾಡಿದ್ದಾರೆ. ಇದೇ ಅವರ ಅಧ್ಯಾಯ ಮುಗಿಯಲು ಕಾರಣವಾಗಿದೆ ಎಂದು ಡಿವಿ ಸದಾನಂದ ಗೌಡ ಹೇಳಿದ್ದಾರೆ.