Mangalore: ಕೊಕ್ಕೊ ಬೀಜದಲ್ಲಿ ಕ್ಯಾಂಪ್ಕೊ ಸಂಸ್ಥೆಗೆ 9.71 ಕೋಟಿ ರೂ. ವಂಚನೆ; ಓರ್ವ ಆರೋಪಿ ಸೆರೆ
Thursday, March 10, 2022
ಮಂಗಳೂರು: ಆಫ್ರಿಕಾ ದೇಶದ ಕೊಕ್ಕೊ ಬೀಜವನ್ನು ಥಾಯ್ ಲ್ಯಾಂಡ್ ದೇಶದ ಕೊಕ್ಕೋ ಬೀಜವೆಂದು ನಂಬಿಸಿ ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿಗೆ ವಂಚನೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಭಾರತೀಯನಾಗಿದ್ದು ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ವಿನ್ಸಿ ಪಿಂಟೋ ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಜೀವನ್ ಲೋಬೊಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕ್ಯಾಂಪ್ಕೋ ಸಂಸ್ಥೆಯು ವಿದೇಶದಿಂದ ಷರತ್ತು ಬದ್ಧ ಕೊಕ್ಕೋ ಬೀಜ ಖರೀದಿಗೆ ಕೋಸ್ಫಾಕ್ ಏಶಿಯಾ ಇಂಟರ್ ನ್ಯಾಷನಲ್ ಕಂ.ಲಿ ಎಂಬ ಕೊಕ್ಕೋ ಸರಬರಾಜು ಸಂಸ್ಥೆಯ ಜೀವನ್ ಲೋಬೊಗೆ ಆದೇಶ ನೀಡಿತ್ತು. ಜೀವನ್ ಲೋಬೊ ದುಬೈ ದೇಶದಲ್ಲಿದ್ದ ವಿನ್ಸಿ ಪಿಂಟೊ ಸಹ ಮಾಲೀಕತ್ವದಲ್ಲಿ ಕೊಕ್ಕೋ ಬೀಜ ಸರಬರಾಜು ಮಾಡುತ್ತಿದ್ದ. ಆದರೆ ಇವರು ಆಫ್ರಿಕಾ ದೇಶದಲ್ಲಿ ಬೆಳೆದ ಕೊಕ್ಕೋ ಬೀಜವನ್ನು ನಕಲಿ ದಾಖಲೆ ಸೃಷ್ಟಿಸಿ ಖೋಟಾ ಗುರುತು ಮಾಡಿ ಥಾಯ್ ಲ್ಯಾಂಡ್ ದೇಶದ ಕೊಕ್ಕೊ ಬೀಜವೆಂದು ವಂಚನೆ ಮಾಡಿದ್ದರು. ಈ ಮೂಲಕ ಆರೋಪಿಗಳು ಒಟ್ಟು 9,71,50,113 ರೂ. ವಂಚನೆ ಮಾಡಿದ್ದರು.
ಈ ಬಗ್ಗೆ ಜೂನ್ 20 2020ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಿಂದ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಸದ್ಯ ಆರೋಪಿ ವಿನ್ಸಿ ಪಿಂಟೋನನ್ನು ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಕ್ಷಣ ಪುತ್ತೂರು ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.