ಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ದುರಂತ-ಐವರ ದುರ್ಮರಣ,ಮೂರು ಮಂದಿ ಗಂಭೀರ
Sunday, April 17, 2022
ಮಂಗಳೂರು: SEZ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನು ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಮೂವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದು, ನಗರದ AJ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಶ್ಚಿಮ ಬಂಗಾಳ ಮೂಲದ ಸಮಿರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್, ಮಿರಾಜುಲ್ಲ್ ಇಸ್ಲಾಂ, ಸರಾಫತ್ ಆಲಿ ಮೃತಪಟ್ಟ ಕಾರ್ಮಿಕರಾಗಿದ್ದಾರೆ. ಘಟನೆಯಲ್ಲಿ ಅಸನ್ ಆಲಿ, ಕರೀಬುಲ್ಲಾ, ಹಫೀಝುಲ್ಲಾ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ 6.30 ಸುಮಾರಿಗೆ ಮೀನು ಸಂಸ್ಕರಣಾ ಘಟಕದ ತ್ಯಾಜ್ಯ ಟ್ಯಾಂಕ್ ಶುಚಿಗೊಳಿಸಲು ನಿಜಾಮುದ್ದೀನ್ ಎಂಬ ಕಾರ್ಮಿಕ ಟ್ಯಾಂಕ್ ಗೆ ಇಳಿದಿದ್ದಾನೆ ಸಂದರ್ಭ ಆತ ಮುಳುಗಿದ್ದಾನೆ. ತಕ್ಷಣ ಆತನನ್ನು ರಕ್ಷಣೆ ಮಾಡಲು ಏಳು ಮಂದಿ ಕಾರ್ಮಿಕರು ಟ್ಯಾಂಕ್ ಗೆ ಇಳಿದಿದ್ದು ಇವರಲ್ಲಿ ಒಟ್ಟು ಎಂಟು ಮಂದಿ ಕಾರ್ಮಿಕರ ಪೈಕಿ ಐವರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಬದುಕುಳಿದ ಕಾರ್ಮಿಕರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಬೈ ಮೂಲದ ವ್ಯಕ್ತಿಗೆ ಸೇರಿರುವ ಬಜ್ಪೆ ಶ್ರೀ ಉಲ್ಕಾ ಎಲ್ಎಲ್ ಪಿ ಮೀನು ಸಂಸ್ಕರಣಾ ಘಟಕದಲ್ಲಿ ಈ ದುರ್ಘಟನೆ ನಡೆದಿದೆ. ಒಟ್ಟು 70ಮಂದಿ ಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಂಪೆನಿಯ ಮಾಲಕನ ವಿರುದ್ಧ 304 section ನಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಮೇಲ್ನೋಟಕ್ಕೆ ನಿರ್ಲಕ್ಷ್ಯ ವಹಿಸಿರುವುದು ಸಾಬೀತಾಗಿದೆ. ಮೃತ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಜಪೆ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಕಂಪನಿಯ Production manager ರೂಬಿ ಜೋಸೆಫ್ , Area manager ಕುಬೇರ್ ಗಾಡೆ, supervisor ಮೊಹಮ್ಮದ್ ಅನ್ವರ್, ಕಾರ್ಮಿಕರನ್ನು ಸ್ಥಳೀಯವಾಗಿ ನೋಡಿ ಕೊಳ್ಳುತ್ತಿದ್ದ ಫಾರೂಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.