ಮಂಗಳೂರು: ಭಗ್ನ ಪ್ರೇಮಿಯಿಂದ ಟವರ್ ಏರಿ ಆತ್ಮಹತ್ಯೆಗೆ ಯತ್ನ!
Sunday, April 17, 2022
ಮಂಗಳೂರು:ಭಗ್ನಪ್ರೇಮಿಯೋರ್ವನು ಟವರ್ ಏರಿ ಅವಾಂತರ ಸೃಷ್ಟಿಸಿರುವ ಘಟನೆ ನಗರದ ಹೊರವಲಯದ ಅಡ್ಯಾರ್ ಬಳಿ ಇಂದು ನಡೆದಿದೆ.
ಅಡ್ಯಾರ್ ನಿವಾಸಿ ಸುಧೀರ್ ಎಂಬಾತ ಅಡ್ಯಾರ್ ನಲ್ಲಿಯೇ ಬಸ್ ಕ್ಲೀನಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಈತನನ್ನು ನಿರ್ಲಕ್ಷ್ಯ ವಹಿಸಿದರೂ, ಈತ ಆಕೆಯನ್ನು ಪ್ರೀತಿಸುವಂತೆ ಅತಿಯಾಗಿ ಪೀಡಿಸುತ್ತಿದ್ದ.
ಭಗ್ನಪ್ರೇಮಿ ಸುಧೀರ್ ನೀಡುತ್ತಿದ್ದ ಕಿರುಕುಳವನ್ನು ಸಹಿಸದ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಿಸಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡುವುದಾಗಿ ಸುಧೀರ್ ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭಗ್ನಪ್ರೇಮಿ ಸುಧೀರ್ ನನ್ನು Tower ನಿಂದ ಇಳಿಸಲು ಹರಸಾಹಸಪಟ್ಟರೂ ಆತ ಇಳಿದಿರಲಿಲ್ಲ.
ಕೊನೆಗೆ ಯುವತಿಯೇ ಬಂದು ದೂರು ವಾಪಸ್ ತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ಆತ ಟವರ್ ನಿಂದ ಇಳಿದಿದ್ದಾನೆ. ಈ ಮೂಲಕ ಭಗ್ನಪ್ರೇಮಿಯ ಅವಾಂತರ ಪ್ರಕರಣ ಸುಖಾಂತ್ಯಗೊಂಡಿದೆ.