Mangalore: ವೆಂಕಟರಮಣ ದೇವಸ್ಥಾನದ ಶಾರದೆಗೆ ವಾರಣಾಸಿಯ ಮುಸ್ಲಿಂ ನೇಕಾರರ ಸೀರೆ..!
Friday, September 23, 2022
ಮಂಗಳೂರು: ಮಂಗಳೂರು ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಶಾರದಾ ಮಹೋತ್ಸವಕ್ಕೆ ಈ ವರ್ಷ ಶತಮಾನದ ಸಂಭ್ರಮ. ಈ ಬಾರಿ ಇಲ್ಲಿನ ಶಾರದೆ ಮಾತೆಯು ವಾರಣಾಸಿಯ ಮುಸ್ಲಿಂ ನೇಕಾರರು ನೇಯ್ದ ಬಂಗಾರದ ಹೂವಿನಿಂದ ಕೂಡಿರುವ ಸ್ವರ್ಣ ಜರಿಯುಳ್ಳ ಸೀರೆಯಲ್ಲಿ ಕಂಗೊಳಿಸಲಿದ್ದಾಳೆ.
1922ರಲ್ಲಿ ಆರಂಭವಾದ ಇಲ್ಲಿನ ಶಾರದಾ ಮಹೋತ್ಸವವು ಈ ಬಾರಿ ಶತ ಸಂವತ್ಸರದ ಸಂಭ್ರಮದಲ್ಲಿದೆ. ಮಂಗಳೂರಿನ ಪ್ರಖ್ಯಾತ ವಸ್ತ್ರ ಮಳಿಗೆ ಕುಲ್ಯಾಡಿಕರ್ಸ್ ನೂತನ್ ಸಿಲ್ಕ್ ನ ಸಹೋದರರು ತಮ್ಮ ಅಮ್ಮನ ನೆನಪಿಗಾಗಿ 1988ರಿಂದ ಶಾರದೆಗೆ ತೊಡಿಸಲು ಒಂದು ದಿನದ ಸೀರೆಯನ್ನು ಹರಕೆಯ ರೂಪದಲ್ಲಿ ನೀಡುತ್ತಿದ್ದಾರೆ. ಅದರಂತೆ ಈ ಬಾರಿಯೂ ಎಂಟು ಮೀಟರ್ ಹರವಿನ ಬನಾರಸ್ ಸೀರೆಯನ್ನು ನೀಡಲಿದ್ದಾರೆ. ವಿಶೇಷವೆಂದರೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಪದ ನೂರುಲ್ಲಾ ಅಮೀರ್ ಎಂಬ ಮುಸ್ಲಿಂ ನೇಕಾರರ ಕುಟುಂಬವೊಂದು ಈ ಸೀರೆಯನ್ನು ಒಂದೂವರೆ ತಿಂಗಳ ಶ್ರಮದಿಂದ ನೇಯ್ಗೆ ಮಾಡಿ ತಯಾರಿಸಿದೆ. ಒಂದು ವಾರದ ನಾಲ್ವರ ಶ್ರಮದಲ್ಲಿ ಸೀರೆಗೆ ಸಂಪೂರ್ಣ ಕಸೂತಿಯನ್ನು ಹೆಣೆಯಲಾಗಿದೆ.
ಹಸಿರು ಬಣ್ಣದ ಈ ಸೀರೆಯಲ್ಲಿ ಸರಿಸುಮಾರು 2,600 ಬಂಗಾರದ ಹೂವಿದೆ. ಅಲ್ಲದೆ ಬೆಳ್ಳಿಗೆ ಬಂಗಾರದ ಕೋಟಿಂಗ್ ಇರುವ ಜರಿಯಿಂದಲೇ ಕಸೂತಿ ಮಾಡಲಾಗಿದೆ. ಸೀರೆಯು ಒಟ್ಟು ಹನ್ನೊಂದು ಪವನ್ ಸ್ವರ್ಣ ಹಾಗೂ ಏಳುನೂರು ಗ್ರಾಂ ಬೆಳ್ಳಿಯನ್ನು ಹೊಂದಿದೆ. ಯಾವತ್ತೂ 60-70 ಸಾವಿರ ರೂ. ಬೆಲೆಯ ಸೀರೆಯನ್ನು ಕೊಡುವ ಕುಲ್ಯಾಡಿಕರ್ಸ್ ಸಹೋದರರು ಈ ಬಾರಿ ತಾಯಿ ಶಾರದೆಗೆ ಬರೋಬ್ಬರಿ 8 ಲಕ್ಷ ರೂ. ಬೆಲೆಬಾಳುವ ಸೀರೆಯನ್ನು ನೀಡಲಿದ್ದಾರೆ.
ಈಗಾಗಲೇ ಈ ಸೀರೆ ಮಂಗಳೂರು ತಲುಪಿದ್ದು, ನವರಾತ್ರಿಯ ಆರನೇ ದಿನ ಶಾರದಾ ಮಾತೆಗೆ ತೊಡಿಸಲಾಗುತ್ತದೆ. ಒಟ್ಟಿನಲ್ಲಿ ಮುಸ್ಲಿಂ ಕುಟಂಬದ ಕೈಸ್ಪರ್ಶದ ಚಾಕಚಕ್ಯತೆಯಿಂದ ಹೆಣೆಯಲಾಗಿರುವ ಈ ಸೀರೆ ಶಾರದಾ ಮಾತೆಯ ಅಲಂಕಾರವಾಗಿ ತೊಡಿಸಲಾಗುತ್ತಿರುವುದು ಕರಾವಳಿಯಲ್ಲಿ ಇನ್ನೂ ಹಿಂದೂ - ಮುಸ್ಲಿಂ ಸೌಹಾರ್ದತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾದಂತಿದೆ.