udupi:ಉಚ್ಚಿಲದಲ್ಲಿ ಲಾರಿ ಡಿಕ್ಕಿ ಹೊಡೆದು ತಂದೆ ಮಗ ಮೃತ ಪಟ್ಟ ಪ್ರಕರಣ. ಲಾರಿ ಚಾಲಯಿಸಿ ಇಬ್ಬರ ಸಾವಿಗೆ ಕಾರಣನಾದ 16ರ ಬಾಲಕ.ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಬಯಲು.
Friday, September 16, 2022
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಬಳಿ ಗೂಡ್ಸ್ ಲಾರಿ ಡಿಕ್ಕಿಯಾಗಿ ಬೆಳಗಾವಿ ಮೂಲದ ತಂದೆ ಮತ್ತು ಮಗ ಸಾವನ್ನಪ್ಪಿದ ಪ್ರಕರರಣದ ಸತ್ಯಾಸತ್ಯತೆ ಬಯಲಾಗಿದೆ. 14 ಚಕ್ರದ ಈ ಬೃಹತ್ ಗೂಡ್ಸ್ ಲಾರಿ ಓಡಿಸುತ್ತಿದ್ದವ ಕೇವಲ 16ರ ಹರೆಯದ ಬಾಲಕ ಅನ್ನೋದು ತನಿಖೆಯಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮುಂಜಾನೆ (ಗುರುವಾರ) ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಬೆಳಗಾವಿಯ ಹುಕ್ಕೇರಿ ಮೂಲದ ಪ್ರಭಾಕರ್ ಮತ್ತು ಅವರ ಮಗ ಸಮರ್ಥ್ ಈ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಂದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಪುತ್ರ ಸಮರ್ಥ್ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಶುಕ್ರವಾರ) ಕೊನೆಯುಸಿರೆಳೆದಿದ್ದ. ಮೂಲತ: ಬೆಳಗಾವಿಯವರಾದ ಪ್ರಭಾಕರ್ ತನ್ನ ಮಗನನ್ನು ಕಾಪು ಕುತ್ಯಾರಿನ ಆನೆಗುಂದಿ ಸಂಸ್ಥಾನದ ಶಾಲೆಗೆ ಸೇರಿಸಿದ್ದರು. ಗಣೇಶ ಹಬ್ಬದ ಪ್ರಯುಕ್ತ ರಜೆಗೆ ಊರಿಗೆ ತೆರಳಿದ್ದು, ಗುರುವಾರ ಮುಂಜಾನೆ ಬೆಳಗಾವಿಯಿಂದ ವಾಪಾಸಾಗಿದ್ದರು. ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಅತಿವೇಗದಿಂದ ಬಂದ ಲಾರಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿತ್ತು. ಅಪಘಾತ ನಡೆದ ಸ್ಥಳದಲ್ಲಿ ಲಾರಿ ನಿಲ್ಲದೆ ಪರಾರಿಯಾಗಿತ್ತು.CCTV ಪೂಟೇಜುಗಳನ್ನು ಪರಿಶೀಲನೆ ನಡೆಸಿ ತನಿಖೆ ತೀವ್ರಗೊಳಿಸಿದ ಪಡುಬಿದ್ರೆ ಪೊಲೀಸರು ಕೊನೆಗೂ ಅಪಘಾತಕ್ಕೆ ಕಾರಣವಾಗಿದ್ದ ಲಾರಿಯನ್ನು ಮೂಡುಬಿದ್ರೆ ಗಂಜಿಮಠದಲ್ಲಿ ವಶಕ್ಕೆ ಪಡೆದಿದ್ದರು.
ಲಾರಿ ಚಾಲಕ ಶೇಖರನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಭಯಾನಕ ಸತ್ಯ ಒಂದು ಹೊರ ಬಿದ್ದಿದೆ. 14 ವೀಲ್ ಗೂಡ್ಸ್ ಲಾರಿಯನ್ನು ಕೇವಲ ಹದಿನಾರರ ಹರೆಯದ ಬಾಲಕನೊಬ್ಬ ಚಲಾಯಿಸಿಕೊಂಡು ಬಂದಿದ್ದನೆಂಬ ಆತಂಕಕಾರಿ ವಿಚಾರ ಬಯಲಾಗಿದೆ. ಚಾಲಕ ಶೇಖರ್ ನ ಬಳಿ, ಈ ಬಾಲಕ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಲಾರಿ ಗುಜರಾತ್ ನಿಂದ ಬರುತ್ತಿದ್ದು ಮುಂಬೈ ಎಕ್ಸ್ ಪ್ರೆಸ್ ಹೈವೇನಲ್ಲೂ ಈ ಬಾಲಕನೇ ರಾತ್ರಿಯಿಡೀ ವಾಹನ ಚಲಾಯಿಸಿದ್ದ.
ಅಪ್ರಾಪ್ತನಿಗೆ ಲಾರಿ ಚಲಾಯಿಸಲು ಕೊಟ್ಟು, ಚಾಲಕ ಶೇಖರ್ ಅನಾಹುತಕ್ಕೆ ಕಾರಣವಾಗಿದ್ದಾನೆ. ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ನೀಡಿದ್ದು ಬಾಲಕನನ್ನು ಬಾಲ ಮಂದಿರದ ವಶಕ್ಕೆ ನೀಡಲಾಗಿದೆ.