ಮಂಗಳೂರು: 50 ಬೋಟ್ ಗಳ ಕಡಲಯಾನದಲ್ಲಿ ಮೊಳಗಿತು ಕೋಟಿ ಕಂಠ ಗಾಯನ mng

ಮಂಗಳೂರು: 50 ಬೋಟ್ ಗಳ ಕಡಲಯಾನದಲ್ಲಿ ಮೊಳಗಿತು ಕೋಟಿ ಕಂಠ ಗಾಯನ mng


ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಕರೆ ನೀಡಿರುವಂತೆ ಕೋಟಿ ಕಂಠ ಗಾಯನವು ಮಂಗಳೂರು ನಗರದಲ್ಲಿ ಅರಬ್ಬಿಸಮುದ್ರದ ಅಲೆಗಳ ನಿನಾದದಲ್ಲಿ 50ರಷ್ಟು ಬೋಟ್ ಗಳ ಒಂದೂವರೆ ತಾಸಿನ ಕಡಲಯಾನದಲ್ಲಿ ಸೊಗಸಾಗಿ ಮೂಡಿ ಬಂತು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಮೀನುಗಾರಿಕಾ ಇಲಾಖೆ, ಮೊಗವೀರ ಸಮಾಜದ ಸಹಯೋಗದಲ್ಲಿ ಈ ಕೋಟಿಕಂಠ ಗಾಯನ ಮೂಡಿ ಬಂತು.‌ ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ ಬೋಟ್ ಗಳು ತೋಟ ಬೆಂಗ್ರೆ ಅಳಿವೆ ಬಾಗಿಲುವರೆಗೆ 8ಕಿ.ಮೀ. ಸಾಗುವ ಮೂಲಕ‌ ಕನ್ನಡದ ಆರು ಹಾಡುಗಳನ್ನು ಹಾಡಲಾಯಿತು. 5 ಪರ್ಸಿನ್ ಬೋಟ್ ಗಳು, 10 ಆಳ ಸಮುದ್ರ ಮೀನುಗಾರಿಕಾ ಬೋಟ್ ಗಳು, 25 ನಾಡದೋಣಿ ಗಳು, 10 ಕರೆ ಫಿಶ್ಶಿಂಗ್ ಬೋಟ್ ಗಳು ಹಾಗೂ 4 ಫೆರಿ ಬೋಟ್ ಗಳಲ್ಲಿ ಕೋಟಿ ಕಂಠಗಾಯನ ಮೂಡಿತು. ಎಲ್ಲಾ ಬೋಟ್ ಗಳ ಸಂಪೂರ್ಣ ಶೃಂಗಾರಗೊಂಡು ಕನ್ನಡದ ಬಾವುಟಗಳಿಂದ ರಾರಾಜಿಸಿತ್ತು. ಸಮುದ್ರ ನಡುವಿನ ಸೊಗಸನ್ನು ವೀಕ್ಷಿಸುತ್ತ ಬೋಟ್ ಗಳ ಭರ್ತಿ ಜನರೊಂದಿಗೆ ಕೋಟಿ ಕಂಠಗಾಯನ ಮೂಡಿತು. ತುಳು ಬಾವುಟವೂ ರಾರಾಜಿಸಿದ್ದು ವಿಶೇಷವೆನಿಸಿತು.
11ಗಂಟೆಗೆ ಬೋಟ್ ಗಳಲ್ಲಿ ಕೋಟಿ ಕಂಠ ಗಾಯನದ ಮೊದಲ ಹಾಡು ಆರಂಭವಾಗಿ ಆರು ಹಾಡುಗಳು ಸೊಗಸಾಗಿ ಮೂಡಿ ಬಂತು. ಕೊನೆಗೆ ತುಳು ಭಾಷೆಯ ಹಾಡನ್ನು ಹಾಡಲಾಯಿತು. ಮಂಗಳೂರು ಮನಪಾ ಉಪ ಮೇಯರ್ ಪೂರ್ಣಿಮಾ, ಮಂಗಳೂರು ಮನಪಾ ಸದಸ್ಯರು, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಆಸಕ್ತರು ಸೇರಿದಂತೆ 500 ಕ್ಕೂ ಅಧಿಕ ಮಂದಿ ಈ ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದರು. ಅಲ್ಲದೆ ಕೋಟಿ ಕಂಠ ಗಾಯನಕ್ಕೂ ಮುನ್ನ ಸುಲ್ತಾನ್ ಬತ್ತೇರಿಯ ಕಡಲ ಕಿನಾರೆಯಲ್ಲಿ ಕರಾವಳಿ‌ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಮೂಹಗಾನ, ದೇಶಭಕ್ತಿಗೀತೆ, ನಾಡಗೀತೆಗಳ ಗಾಯನ‌ ನೆರವೇರಿತು‌.‌

Ads on article

Advertise in articles 1

advertising articles 2

Advertise under the article