Mangalore:ಅತಿಯಾದ ಸಂಶಯ ಪತ್ನಿಯನ್ನ ಕುತ್ತಿಗೆ ಹಿಸುಕಿ ಕೊಂದು,ತಾನು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸೈಕೋ ಪತಿರಾಯ.
Thursday, October 27, 2022
ಉಳ್ಳಾಲ:ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೋರ್ವ ಪತ್ನಿಯನ್ನ ಕತ್ತು ಹಿಸುಕಿ ಕೊಂದು ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ.
ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ(45)ಕೊಲೆಯಾದ ಮಹಿಳೆ ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ (55) ಆತ್ಮಹತ್ಯೆಗೈದವರಾಗಿದ್ದಾರೆ.
ಇಂದು ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಶೋಭಾ ಅವರು ಮನೆ ಹತ್ತಿರದ ಇನ್ನೂರು ಗುತ್ತು ಕುಟುಂಬಸ್ಥರ ಮನೆಯಿಂದ ಗೊಬ್ಬರ ತಂದಿದ್ದರು.ಮದ್ಯಾಹ್ನ 12 ಗಂಟೆ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಪಕ್ಕದ ಇನ್ನೂರು ಗುತ್ತು ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾನೆ.ಪಕ್ಕದ ಮನೆಯ ಶಕುಂತಳ ಶೆಟ್ಟಿ ಅವರು ಶೋಭಾ ಅವರ ಮನೆಯೊಳಗೆ ಪ್ರವೇಶಿಸಿದಾಗ ಶೋಭಾ ಅವರು ಬೆಡ್ ರೂಮಿನ ಮಂಚದಲ್ಲಿ ಹೆಣವಾಗಿದ್ದರು.ಗಾಬರಿಗೊಂಡ ಶಕುಂತಳ ಅವರು ಮನೆಮಂದಿಗೆ ತಿಳಿಸಿದಾಗ ಪಕ್ಕದ ತೋಟದ ಮರಕ್ಕೆ ಶಿವಾನಂದ ಅವರು ನೇಣು ಬಿಗಿದದ್ದು ತಿಳಿದು ಬಂದಿದೆ.
ಶಿವಾನಂದ ಪೂಜಾರಿ ಅವರು ಪೈಂಟರ್ ಕೆಲಸ ಮಾಡುತ್ತಿದ್ದು ಪತ್ನಿ ಮಾತ್ರವಲ್ಲದೆ ನೆರೆಹೊರೆಯವರಲ್ಲೂ ವಿನಾ ಕಾರಣ ತಗಾದೆ ಎತ್ತಿ ಗಲಾಟೆ ನಡೆಸುತ್ತಿದ್ದನಂತೆ.ಪತ್ನಿ ಶೋಭಾ ಅವರು ಸನ್ನಡತೆಯ ಮಹಿಳೆಯಾದರೂ ಆಕೆಗೆ ಯಾರಾದರೂ ಫೋನ್ ಕರೆ ಮಾಡಿದರೂ ಸೈಕೋ ಪತಿರಾಯ ಗಲಾಟೆ ನಡೆಸುತ್ತಿದ್ದನೆಂದು ನೆರೆಹೊರೆಯ ನಿವಾಸಿಗಳು ತಿಳಿಸಿದ್ದಾರೆ.
ಶೋಭಾ ಅವರ ಕಿರಿಯ ಮಗಳು ಕಾವ್ಯ ಎರಡು ವರುಷ ಹಿಂದಷ್ಟೆ ಮದುವೆಯಾಗಿದ್ದಳು.ಹಿರಿಯ ಮಗ ಕಾರ್ತಿಕ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ.
ಎಸಿಪಿ ದಿನಕರ ಶೆಟ್ಟಿ ಮತ್ತು ವಿಧಿ ವಿಜ್ನಾನ ತಜ್ನರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.