ಕಾಸರಗೋಡು: ಅನಂತಪುರ ಕ್ಷೇತ್ರದ ನಿರುಪದ್ರವಿ ಮೊಸಳೆ 'ಬಬಿಯಾ' ಇನ್ನಿಲ್ಲ

ಕಾಸರಗೋಡು: ಅನಂತಪುರ ಕ್ಷೇತ್ರದ ನಿರುಪದ್ರವಿ ಮೊಸಳೆ 'ಬಬಿಯಾ' ಇನ್ನಿಲ್ಲ


ಕಾಸರಗೋಡು: ಕರ್ನಾಟಕದ ಗಡಿ ಭಾಗ ಕೇರಳ ರಾಜ್ಯದ ಕುಂಬಳೆ ಅನಂತಪುರದ ಮೊಸಳೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ  ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ 'ಬಬಿಯಾ' ಇಹಲೋಕವನ್ನು ತ್ಯಜಿಸಿದೆ.

ಕುಂಬಳೆ ಅನಂತಪುರದ ಕ್ಷೇತ್ರವು ಕೆರೆಯ ಮಧ್ಯೆಯಿರುವ ದೇವಸ್ಥಾನ‌. ಆದ್ದರಿಂದ ಇದು ಸರೋವರ ಕ್ಷೇತ್ರವೆಂದೂ ಪ್ರಸಿದ್ಧಿ ಗಳಿಸಿದೆ. ಈ ಕೆರೆಯಲ್ಲಿದ್ದ ಮೊಸಳೆ ಬಬಿಯಾ 'ದೇವರ ಮೊಸಳೆ' ಎಂದೇ ಪ್ರಸಿದ್ದಿ ಪಡೆದಿತ್ತು. ಸಾಕಷ್ಟು  ವರ್ಷಗಳಿಂದಲೂ ದೇವಸ್ಥಾನದ ಕೆರೆಯಲ್ಲಿ ವಾಸಿಸುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ದೇವಾಲಯದ ಸಂಪ್ರದಾಯ. ಕೆಲವು ವರ್ಷದ ಹಿಂದೆ ಕೆರೆಯಿಂದ ಹೊರಬಂದಿದ್ದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.

ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಿತ್ತು . ನಿರುಪದ್ರವಿ ಮೊಸಳೆಯ ವಾಸವಿರುವುದರಿಂದ ಅನಂತಪುರ ಕ್ಷೇತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿತ್ತು. ಸ್ವಾತಂತ್ರ್ಯ ಪೂರ್ವದಲ್ಲೇ ಈ ಕ್ಷೇತ್ರದಲ್ಲಿ ಮೊಸಳೆ ವಾಸವಿದ್ದು, ಅದನ್ನು ಈ ಪ್ರದೇಶದಲ್ಲಿ ಹಾಕಲಾಗಿದ್ದ ಮಿಲಿಟರಿ ಕ್ಯಾಂಪ್ ನ ಬ್ರಿಟೀಷರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಆ ಬಳಿಕ ಮತ್ತೊಂದು ಮೊಸಳೆ ಮರಿ ತಾನಾಗಿಯೇ ಕೆರೆಯಲ್ಲಿ ಪ್ರತ್ಯಕ್ಷಗೊಂಡಿತ್ತು. ಅದಕ್ಕೆ ಬಬಿಯಾ ಎಂದು ಹೆಸರಿಡಲಾಗಿತ್ತು. ಈವರೆಗೆ ಯಾವೊಬ್ಬ ಭಕ್ತರಿಗೂ ತೊಂದರೆ ನೀಡದ ಬಬಿಯಾ ಮೊಸಳೆಯು ಇತ್ತೀಚಿನ ದಿನದಲ್ಲಿ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿತ್ತು . ಅದಕ್ಕೆ ಚಿಕಿತ್ಸೆಯೂ ನಡೆಯುತಿತ್ತು.‌ ಆದರೆ ನಿನ್ನೆ ರಾತ್ರಿ ಅದು ಮೃತಪಟ್ಟಿದೆ. ಪರಿಸರದ ಭಕ್ತರು ಸೇರಿ ಮೊಸಳೆಯನ್ನು ನೀರಿಂದ ಮೇಲೆತ್ತಿ ಕ್ಷೇತ್ರ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಇರಿಸಿದ್ದಾರೆ. ತಂತ್ರಿಗಳ ಆಗಮನದ ಬಳಿಕ ಅದರ ಅಂತ್ಯವಿಧಿ ಕ್ರಿಯೆಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article