Mangalore: ವೈಷ್ಣೋದೇವಿ ದರ್ಶನಕ್ಕೆ ಹೆಲಿಕಾಪ್ಟರ್ ಬುಕ್ಕಿಂಗ್ ನೆಪದಲ್ಲಿ ಬೆಂಗಳೂರು ಟೆಕ್ಕಿಗೆ ವಂಚನೆ
Friday, October 7, 2022
ಮಂಗಳೂರು: ಜಮ್ಮು ಕಾಶ್ಮೀರದ ಪ್ರಸಿದ್ಧ ಶಕ್ತಿಕ್ಷೇತ್ರ ವೈಷ್ಣೋದೇವಿ ಮಂದಿರಕ್ಕೆ ಹೆಲಿಕಾಪ್ಟರ್ ಬುಕ್ಕಿಂಗ್ ನೆಪದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೋರ್ವರಿಗೆ ಮಂಗಳೂರಿನಲ್ಲಿ ಆನ್ ಲೈನ್ ಮೂಲಕ ವಂಚನೆಗೈದಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿರುವ ಈ ಟೆಕ್ಕಿ ಜಮ್ಮುಕಾಶ್ಮೀರದ ವೈಷ್ಣೋದೇವಿಯ ದರ್ಶನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ಸರ್ಚ್ ಮಾಡಿದ್ದಾರೆ. ಆದರೆ ಮಂಗಳೂರಿನಿಂದ ಅಲ್ಲಿಗೆ ನೇರ ವಿಮಾನ ಸಂಚಾರವಿಲ್ಲದಿರುವುದು ಅವರ ಗಮನಕ್ಕೆ ಬಂದಿದೆ. ಆದ್ದರಿಂದ ಅವರು ಖಾಸಗಿ ಹೆಲಿಕಾಪ್ಟರ್ ಸೌಲಭ್ಯವಿದೆಯೇ ಎಂಬುದರ ಬಗ್ಗೆ ಸರ್ಚ್ ಮಾಡಿದ್ದಾರೆ. ಆಗ ನಿತಿನ್ ಎಂಬಾತ ಫೋನ್ ಕರೆಗೆ ಸಿಕ್ಕಿದ್ದು, ಆತ ರ
ತನ್ನನ್ನು ವೈಷ್ಣೋದೇವಿ ಪ್ರತಿನಿಧಿ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ಆತ ಹೆಲಿಕಾಪ್ಟರ್ ಬುಕ್ಕಿಂಗ್ ಅಡ್ವಾನ್ಸ್ ಎಂದು 38,060 ರೂ. ಕಳುಹಿಸಲು ಹೇಳಿದ್ದಾನೆ. ಅದರಂತೆ ಆತ ಕಳುಹಿಸಿರುವ ಕ್ಯೂಆರ್ ಕೋಡ್ ಗೆ ಹಣ ಕಳುಹಿಸಲು ತಿಳಿಸಿದ್ದಾನೆ. ಆದರೆ ಆ ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿದೆ. ದೇವಸ್ಥಾನಕ್ಕೆ ಕರೆ ಮಾಡಿದಾಗ ಆ ಹೆಸರಿನ ಸಿಬ್ಬಂದಿ ತಮ್ಮಲ್ಲಿ ಯಾರೂ ಇಲ್ಲವೆಂದು ಹೇಳಿದ್ದಾರೆ. ಈ ವೇಳೆ ಅವರಿಗೆ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.