ಮಂಗಳೂರು: 'ನಮೀಬಿಯಾ ಚೀತಾ' ಹೆಸರಿನಲ್ಲಿ ಗರ್ಭಿಣಿಗೆ ಅವಮಾನ; ಸಾಮಾಜಿಕ ಕಾರ್ಯಕರ್ತ ಅರೆಸ್ಟ್
Sunday, October 9, 2022
ಮಂಗಳೂರು: ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಗರ್ಭಿಣಿ ಮಹಿಳೆಗೆ ಅವಹೇಳನ ಮಾಡಿರುವ ಆರೋಪದಡಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನು ಮಂಗಳೂರಿನ ಬಜ್ಪೆ ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ.
ನಮೀಬಿಯಾ ಚೀತಾ ಗರ್ಭ ಧರಿಸಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಬರಹ ಬರೆದಿರುವ ಸುನಿಲ್ ಬಜಿಲಕೇರಿ 'ನಮೀಬಿಯಾ ಚೀತಾಗೆ ಸೀಮಂತ ಯಾವಾಗ?' ಎಂದು ಗರ್ಭಿಣಿಯ ಫೋಟೋಗೆ ಚೀತಾದ ಮುಖವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಇದು ಗರ್ಭಿಣಿ ಹಾಗೂ ಭಾರತೀಯ ಸಂಸ್ಕೃತಿಗೆ ಅವಹೇಳನ ಅಂತ ಎಡಪದವು ಗ್ರಾಮದ ಮಹಿಳೆಯೋರ್ವರು ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುನೀಲ್ ಬಜಿಲಕೇರಿ ಬಂಧನವಾಗಿದೆ.
ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಸದಾ ಟೀಕಾಪ್ರಹಾರ ಮಾಡುತ್ತಿದ್ದ ಸುನೀಲ್ ಬಜಿಲಕೇರಿ, ತನ್ನ ಸಾಮಾಜಿಕ ತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದಿದ್ದ ಚೀತಾದ ಹೆಸರಲ್ಲಿ ಮತ್ತೆ ಅವಹೇಳನದ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಹಿಂದೂ ಸಂಘಟನೆಯಲ್ಲಿದ್ದ ಇವರು ಸದ್ಯ ಸಂಘಟನೆಯಿಂದ ಹೊರಬಂದಿದ್ದಾರೆ. ಆ ಬಳಿಕದಿಂದ ಸುನೀಲ್ ಬಜಿಲಕೇರಿ ಬಿಜೆಪಿ ನಾಯಕರ ವಿರುದ್ಧ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.