ಸುರತ್ಕಲ್: ಟೋಲ್ ಗೇಟ್ ವಿರೋಧಿ ಹೋರಾಟಗಾರರ ಮನೆಗೆ ನೋಟಿಸ್ ಗೆ ಪ್ರತಿಭಾ ಕುಳಾಯಿ ಆಕ್ರೋಶ; ಪೊಲೀಸ್ ಕಮಿಷನರ್ ಸ್ಪಷ್ಟನೆ
Sunday, October 16, 2022
ಸುರತ್ಕಲ್: ನಗರದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರ ಮನೆಗೆ ಶನಿವಾರ ರಾತ್ರಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಿರುವುದರ ವಿರುದ್ಧ ಮಾಜಿ ಕಾರ್ಪೊರೇಟರ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು, ಟೋಲ್ ಗೇಟ್ ವಿರೋಧಿ ಹೋರಾಟಗಾರರು ಮಾಡಿರುವ 'ನೇರ ಕಾರ್ಯಾಚರಣೆ' ಎಂಬ ಪದ ಪ್ರಯೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಅವಶ್ಯಕತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.
ಮಂಗಳೂರು ನಗರದ ಸುರತ್ಕಲ್ ನ ಎನ್ಐಟಿಕೆ ಬಳಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ತೆರವು ಮಾಡಬೇಕೆಂದು ಟೋಲ್ ಗೇಟ್ ವಿರೋಧಿ ಸಮಿತಿಯು ಅ.18ರಂದು 'ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ನೇರ ಕಾರ್ಯಾಚರಣೆ ಮುತ್ತಿಗೆ ಪ್ರತಿಭಟನೆ' ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸುರತ್ಕಲ್ ಪೊಲೀಸರು ಟೋಲ್ ಗೇಟ್ ವಿರೋಧಿ 16 ಹೋರಾಟಗಾರರ ಮನೆಗೆ ತೆರಳಿ ನೋಟಿಸ್ ಜಾರಿ ಮಾಡಿತ್ತು.
ರಾತ್ರೋರಾತ್ರಿ ಪೊಲೀಸರು ಮನೆಗೆ ಬಂದಿರುವ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿಯವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪೊಲೀಸರ ವರ್ತನೆಯಿಂದ ತನ್ನ 74 ವರ್ಷದ ಅತ್ತೆ ಭಯಭೀತರಾಗಿದ್ದಾರೆ. ಮಂಗಳೂರು ಸುರಕ್ಷಿತವೇ? ಇಲ್ಲಿ ಮಹಿಳೆಯರು ಸುರಕ್ಷಿತರೇ?, ಮಹಿಳೆಯರು ಇರುವ ಮನೆಯ ಬಾಗಿಲನ್ನು ಪೊಲೀಸರು ಮಧ್ಯರಾತ್ರಿ ಬಂದು ತಟ್ಟಬಹುದೇ? ಇದೆಂತಹಾ ಪ್ರಜಾಪ್ರಭುತ್ವ' ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಮುನೀರ್ ಕಾಟಿಪಳ್ಳ ಅವರು 'ನಿಮ್ಮ ಬೆದರಿಕೆಗೆ ಜನರು ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬಿಜೆಪಿಗರು ಬೆತ್ತಲಾಗುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. 'ಸುರತ್ಕಲ್ ಟೋಲ್ ಗೇಟ್ ವಿರೋಧಿ ಆಂದೋಲನದಲ್ಲಿ ಭಾಗವಹಿಸುವ ಪ್ರಮುಖರು ಕೆಲವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಮುಖಂಡರನ್ನು ಮೇಲೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಕಾರ್ಯನಿರ್ವಾಹಕರಾಗಿರುವ ಡಿಸಿಪಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸಬೇಕು. ಆದ್ದರಿಂದ ಪೊಲೀಸರು ತಡರಾತ್ರಿ ಮನೆಗೆ ತೆರಳಿ ನೋಟಿಸ್ ಜಾರಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಉತ್ತರ ಮಹೇಶ್ ಕುಮಾರ್ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.