ಮಂಗಳೂರು: ವಕೀಲರುಗಳ ಸಹಿತ ಸಾರ್ವಜನಿಕರಿಗೆ ಪ್ರವೇಶ ಸ್ಥಗಿತವಾದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ದ್ವಾರ!
Sunday, October 16, 2022
ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದಲ್ಲಿ ವಕೀಲರುಗಳು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿ ಕೇವಲ ನ್ಯಾಯಧೀಶರಿಗಷ್ಟೇ ಪ್ರವೇಶ ಎಂಬ ಹೊಸ ನಿಯಮ ಜಾರಿಗೊಂಡಿದೆ. ಪರಿಣಾಮ ವಕೀಲರುಗಳು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಜಿಲ್ಲಾ ನ್ಯಾಯಾಲಯ ಕಟ್ಟಡವು ಸರಕಾರಿ ಕಾರ್ಯಕ್ಕಾಗಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಹೊಂದಿರುವ ಕಟ್ಟಡವಾಗಿದೆ. ಆದರೆ ನೂತನವಾಗಿ ಜಾರಿಯಾಗಿರುವ ನಿಯಮದಿಂದ ದ.ಕ.ಜಿಲ್ಲಾ ನ್ಯಾಯಧೀಶರು ಮಾತ್ರ ಮುಖ್ಯದ್ವಾರದಿಂದ ಪ್ರವೇಶಿಸಬಹುದು. ವಕೀಲರು ಸಹಿತ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿರುವುದು ತೀವ್ರ ಅಸಮಾಧಾನವನ್ನು ಹುಟ್ಟು ಹಾಕಿದೆ.
ನ್ಯಾಯಾಂಗದ ಅಂಗವಾಗಿರುವ ನ್ಯಾಯವಾದಿಗಳಿಗೂ ಕೂಡ ಪ್ರವೇಶ ನಿರ್ಬಂದಿಸಿರುವ ಜಿಲ್ಲಾ ನ್ಯಾಯಾಧೀಶ ರವೀಂದ್ರ ಎಂ. ಜೋಶಿಯವರ ಕ್ರಮ ತೀವ್ರ ಟೀಕೆಗೆ ಒಳಗಾಗಿದೆ. ತಕ್ಷಣ ಈ ನಾಮಫಲಕವನ್ನು ತೆರವು ಗೊಳಿಸುವಂತೆ ಈಗಾಗಲೇ ವಕೀಲರ ಸಂಘ ಒತ್ತಾಯಿಸಿದೆ.ಆದರೆ ವಕೀಲರ ಸಂಘದ ಮನವಿಗೆ ಸೂಕ್ತ ಸ್ಪಂದನೆ ಈವರೆಗೆ ದೊರಕಿಲ್ಲ.
ಈ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರ ವಕೀಲರ ಸಭೆ ಕೂಡ ಕರೆಯಲಾಗಿದೆ ಎನ್ನಲಾಗಿದೆ. ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದ ನಿರ್ಬಂಧದ ನಿಯಮ ಜಾರಿಯ ಮೊದಲ ದಿನವಾದ ಸೋಮವಾರ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.