ತೊಕ್ಕೊಟ್ಟು - ಕುಂಪಲ ಬೈಪಾಸ್ : ಸರ್ವೀಸ್ ರಸ್ತೆಗೆ ಒತ್ತಾಯ : ತೀವ್ರ ಹೋರಾಟಕ್ಕೆ ನಿರ್ಧಾರ
Tuesday, October 11, 2022
ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ಸಾರ್ವಜನಿಕ ಹೋರಾಟ ಸಮಿತಿಯು ಆಗ್ರಹಿಸಿದೆ.
ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸಭೆಯು ಸೋಮವಾರ ಸಂಜೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಸಮಿತಿಯ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹೋರಾಟ ಸಮಿತಿಯ ಸಭೆಯಲ್ಲಿ ಸರ್ವ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಹೋರಾಟದ ರೂಪುರೇಷೆಯ ಬಗ್ಗೆ ವಿವರ ನೀಡಿದ ಸಮಿತಿ ಅಧ್ಯಕ್ಷ ಸುಕುಮಾರ್ ಅವರು ಕಳೆದ ಹತ್ತು ದಿನಗಳ ಅವಧಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ, ಜಿಲ್ಲಾಧಿಕಾರಿ, ಸಂಸದರು, ಶಾಸಕರು , ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ . ಹೋರಾಟ ಸಮಿತಿಯ ಬೇಡಿಕೆ ಬಗ್ಗೆ ಎಲ್ಲರಿಂದಲೂ ಪೂರಕ ಸ್ಪಂದನೆ ಲಭಿಸಿದೆ , ಬೇಡಿಕೆ ಈಡೇರುವ ತನಕ ಸ್ಥಳೀಯರು ಒಟ್ಟಾಗಿ ನಿಂತು ಹೋರಾಟ ಮುಂದುವರಿಸಬೇಕೆಂದು ಹೇಳಿದರು.
ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ಜನನಿಬಿಡ ಪ್ರದೇಶದಲ್ಲಿ ಅತ್ಯಂತ ಅಗತ್ಯವಾಗಿ ನಿರ್ಮಾಣವಾಗಬೇಕಿದ್ದ ಸರ್ವೀಸ್ ರಸ್ತೆಯನ್ನು ಇಷ್ಟು ಸಮಯ ನಿರ್ಮಾಣ ಮಾಡದೇ ಇದ್ದುದರಿಂದ ಕಳೆದ ಒಂದೂವರೆ ವರ್ಷದಲ್ಲಿ ಈ ಪ್ರದೇಶದಲ್ಲಿ ಅಪಘಾತದಿಂದಾಗಿ ಅನೇಕ ಮಂದಿ ಮೃತಪಟ್ಟರೂ ನಾಗರಿಕರ ಪ್ರಾಣ ರಕ್ಷಣೆ ಮಾಡಬೇಕಾದ ಇಲಾಖೆ , ಜಿಲ್ಲಾಡಳಿತ ಎಚ್ಚೆತ್ತುಗೊಂಡಿಲ್ಲ , ಇದೀಗ ಜನ ಸಂಘಟಿತರಾಗಿ ಒಗ್ಗಟಿನಿಂದ ಹೋರಾಟ ನಡೆಸಿದರೆ ಮಾತ್ರ ಸರ್ವೀಸ್ ರಸ್ತೆಯ ಬೇಡಿಕೆ ಈಡೇರಲು ಸಾಧ್ಯ ಎಂದರು.
ಸಮಿತಿ ಗೌರವ ಅಧ್ಯಕ್ಷ ಈಶ್ವರ್ ಉಳ್ಳಾಲ್ ಅವರು ಮಾತನಾಡಿ , ಈ ಪ್ರದೇಶದ ಜನರ ಪ್ರಾಣ ಕಾಪಾಡಬೇಕಾದರೆ ಎರಡೂ ಬದಿಯಿಂದಲೂ ಸರ್ವೀಸ್ ರಸ್ತೆ ಅಗತ್ಯವಾಗಿದ್ದು , ಈ ನಿಟ್ಟಿನಲ್ಲಿ ನಡೆಯುವ ಹೋರಾಟದಲ್ಲಿ ತಾನು ಮುಂಚೂಣಿಯಲ್ಲಿ ನಿಂತು ಜನರ ಪರವಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹೋರಾಟ ಸಮಿತಿಯ ಗೌರವ ಸಲಹೆಗಾರ ಸತೀಶ್ ಕುಂಪಲ ಅವರು ಮಾತನಾಡಿ , ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಕುಂಪಲ ಬೈಪಾಸ್ ತನಕ ಸರ್ವೀಸ್ ರಸ್ತೆ ನಿರ್ಮಾಣ ಮಾಡುವವರೆಗೂ ನಾನು ಹೋರಾಟದ ಮುಂಚೂಣಿಯಲ್ಲಿ ನಿಂತು ಜನರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.
ಈಗಾಗಲೇ ಹೆದ್ದಾರಿ ಇಲಾಖೆಯವರು ಕಾಪಿಕಾಡ್ ಅವೈಜ್ಞಾನಿಕ ಯೂಟರ್ನ್ ತೆರವುನ್ನು ಮುಚ್ಚಿ ಅಂಬಿಕಾರೋಡ್ ಗೆ ಯೂಟರ್ನ್ ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿದ್ದು , ಈ ಸ್ಥಳಾಂತರ ಪ್ರಕ್ರಿಯೆಯನ್ನು ತಕ್ಷಣವೇ ಮಾಡುವಂತೆ ಸಭೆ ಹೋರಾಟ ಸಮಿತಿ ಸಭೆ ಆಗ್ರಹಿಸಿತು.
ಸಭೆಯಲ್ಲಿ ಹೋರಾಟ ಸಮಿತಿಯ ಗೌರವ ಸಲಹೆಗಾರ ಎ.ಜೆ ಶೇಖರ್ , ಪಧಾದಿಕಾರಿಗಳಾದ ನಗರಸಭಾ ಸದಸ್ಯೆ ಭವಾನಿ , ದೀಪಕ್ ಪಿಲಾರು, ದೇವದಾಸ್ ಕೊಲ್ಯ, ರಘುರಾಮ ಶೆಟ್ಟಿ, ದಿನೇಶ್ ರೈ ಕಳ್ಳಿಗೆ,ಪ್ರಶಾಂತ್ ಕಾಪಿಕಾಡ್, ಶ್ರೀಮತಿ ದಮಯಂತಿ, ಹ್ಯಾರಿ ಡಿಸೋಜ, ಗೋಪಿನಾಥ್ ಕಾಪಿಕಾಡ್, ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ ಗಟ್ಟಿ ಪಿಲಿಕೂರು, ದಿನೇಶ್ ಅತ್ತವರ್, ಗಣೇಶ್ ಕಾಪಿಕಾಡ್ , ಜನಾರ್ಧನ್, ಭಾಸ್ಕರ ಗಟ್ಟಿ , ಕಿರಣ್ ಕಾಪಿಕಾಡ್ ,ಕೂಸಪ್ಪ ಗಟ್ಟಿ, ಸಂತೋಷ್ ಭಂಡಾರಿ ತೊಕ್ಕೊಟ್ಟು , ಲಾಜರ್ ಮೊದಲಾದವರು ಭಾಗವಹಿಸಿದ್ದರು . ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ನಿರ್ವಹಣೆ ಮಾಡಿ ವಂದಿಸಿದರು .