ಮಂಗಳೂರು: ರಾಜ್ಯದಲ್ಲಿರುವ 11 ಬೀಫ್ ಫ್ಯಾಕ್ಟರಿಗಳನ್ನು ಬಂದ್ ಮಾಡಿಸುವ ತಾಕತ್ತು ಬಿಜೆಪಿ ಸರಕಾರಕ್ಕಿದೆಯೇ
Tuesday, November 8, 2022
ಮಂಗಳೂರು: ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳ ವಿಚಾರ ಮಂಗಳೂರು ಮನಪಾ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ್ದು. ಇದರ ಬಗ್ಗೆ ಅವರು ಕಾನೂನು ಕ್ರಮ ಕೈಗೊಳ್ಳಲಿ. ರಾಜ್ಯದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡವರ 11 ಬೀಫ್ ಫ್ಯಾಕ್ಟರಿಗಳಿವೆ. ಅದನ್ನು ಬಂದ್ ಮಾಡಿಸುವ ತಾಕತ್ತು ಬಿಜೆಪಿ ಸರಕಾರಕ್ಕಿದೆಯೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಯು.ಟಿ.ಖಾದರ್ ಕಿಡಿಕಾರಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಗೋವುಗಳ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಗೋ ಸಂತತಿಯನ್ನು ಹೆಚ್ಚಿಸಲು ಯಾವ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಸರಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ದನ ಕರುಗಳನ್ನು ಉಚಿತವಾಗಿ ನೀಡಲಾಗಿತ್ತು. ಮೇವಿಗೆ ಹಣ ನೀಡಲಾಗಿತ್ತು. ಕೆಂಜಾರಿನ ಗೋಶಾಲೆನ್ನು ಕೆಡವಿಹಾಕಿ ಅಪರೂಪದ ಕಪಿಲ ತಳಿಯ ಗೋವುಗಳನ್ನು ಬೀದಿಪಾಲು ಮಾಡಿದಾಗ ಬಿಜೆಪಿಯವರಿಗೆ ಗೋವಿನ ಬಗ್ಗೆ ಕಾಳಜಿ ಇರಲಿಲ್ಲವೇ. ಅದರ ಶಾಪ ಬಿಜೆಪಿಯವರಿಗೆ ತಟ್ಟದೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾಗಾಂಧಿಯವರು ಗೋಹತ್ಯೆಯ ಕುರಿತು ಇಡೀ ದೇಶಕ್ಕೇ ಕಾನೂನೊಂದನ್ನು ಜಾರಿಗೊಳಿಸಿದ್ದರು. ಆದರೆ ಇದೀಗ ಬಿಜೆಪಿ ಸರಕಾರ ಒಂದೊಂದು ಕಾನೂನನ್ನು ಜಾರಿಗೊಳಿಸುತ್ತಿದೆ. ಇಡೀ ದೇಶಕ್ಕೇ ಮಾದರಿ ಆಗುವ ಕಾನೂನನ್ನು ದಿಲ್ಲಿಯಲ್ಲಿ ಕುಳಿತವರಿಗೆ ಯಾರ ಭಯ ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.
'ಹಿಂದೂ ಎಂಬದು ಅಶ್ಲೀಲ ಪದ' ಇದು ಸತೀಶ್ ಜಾರಕಿಹೊಳಿಯವರ ವೈಯಕ್ತಿಕ ಹೇಳಿಕೆ. ಇದನ್ನು ಅವರು ಪಕ್ಷದ ವೇದಿಕೆಯಲ್ಲಿ ಎಲ್ಲೂ ಹೇಳಿದ್ದಲ್ಲ. ಆದರೆ ಯಾರಿಗೂ ವೈಯುಕ್ತಿಕವಾಗಿ ನೋವು ಆಗುವಂತಹ ಹೇಳಿಕೆಯನ್ನು ಯಾರೂ ಹೇಳಬಾರದು. ಈ ಬಗ್ಗೆ ಪಕ್ಷದ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಖಾದರ್ ಹೇಳಿದರು.