ಮಂಗಳೂರು: 21 ಡಿಸಿಸಿ ಬ್ಯಾಂಕ್ ಗಳಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್ ನಂಬರ್ ಒನ್ ಸ್ಥಾನದಲ್ಲಿದೆ

ಮಂಗಳೂರು: 21 ಡಿಸಿಸಿ ಬ್ಯಾಂಕ್ ಗಳಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್ ನಂಬರ್ ಒನ್ ಸ್ಥಾನದಲ್ಲಿದೆ


ಮಂಗಳೂರು: ರಾಜ್ಯದಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೇ ಮುಂಚೂಣಿ ರಾಜ್ಯವಾಗಿರುವುದು ನಮ್ಮೆಲ್ಲರ ಹೆಮ್ಮೆ. ಮಂಗಳೂರು ಭಾಗದಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿದ್ದು, ಠೇವಣಿದಾರರ ವಿಶ್ವಾಸ ಉಳಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.


ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಪ್ತಾಹವನ್ನು ಅತ್ಯಂತ ಬದ್ಧತೆಯಿಂದ, ವ್ಯವಸ್ಥಿತವಾಗಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಆಯೋಜಿಸಿದ್ದಾರೆ. 21 ಡಿಸಿಸಿ ಬ್ಯಾಂಕ್ ಗಳಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್ ನಂಬರ್ ಒನ್ ಸ್ಥಾನದಲ್ಲಿದೆ. ಸಹಕಾರ ಕ್ಷೇತ್ರ ಸಹಸ್ರಾರು ಜನರಿಗೆ ಉದ್ಯೋಗವಕಾಶ ಕಲ್ಪಿಸುವುದರ ಜೊತೆಗೆ ಕೋಟ್ಯಂತರ ಜನರಿಗೆ ಅನುಕೂಲಗಳನ್ನು ಕಲ್ಪಿಸಿದೆ.‌ 3 ಲಕ್ಷ ಹೊಸ ರೈತರು ಸೇರಿದಂತೆ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಶೂನ್ಯ ಬಡ್ಡಿ ದರದಲ್ಲಿ ಈ ವರ್ಷ ಸಾಲ ವಿತರಣೆ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಾಲ ವಿತರಣೆ ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ ಎಂದರು. 

ಸಹಕಾರಿಗಳ ಬೇಡಿಕೆಯಂತೆ ಯಶಸ್ವಿನಿ ಯೋಜನೆಯನ್ನು ಮರುಜಾರಿ ಮಾಡಲಾಗುತ್ತಿದೆ. ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ವೇಳೆ ಜಾರಿಯಾಗಿದ್ದ ಈ ಯೋಜನೆ ಕಾರಣಾಂತರಗಳಿಂದ ಆರೋಗ್ಯ ಇಲಾಖೆಯೊಂದಿಗೆ ವಿಲೀನಗೊಂಡಿತ್ತು. ರಾಜ್ಯದ ಪ್ರವಾಸದ ವೇಳೆ ಎಲ್ಲೆಡೆ ಯಶಸ್ವಿನಿ ಯೋಜನೆ ಮರುಜಾರಿಗೆ ಒತ್ತಾಯ ಕೇಳಿಬಂದಿತು. ಆದ್ದರಿಂದ ಸಿಎಂ ಬೊಮ್ಮಾಯಿಯವರು ಈ ಯೋಜನೆಯನ್ನು ಮರುಜಾರಿ ಮಾಡಿ, ನ.14ರಂದು ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದ ಎಲ್ಲಾ ಸಹಕಾರಿಗಳಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯದಲ್ಲಿ 15 ಹಾಲು ಒಕ್ಕೂಟಗಳಿದ್ದು, ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ರೈತರು ಹಾಲು ಪೂರೈಕೆ ಮಾಡುತ್ತಿದ್ದಾರೆ. ಹಾಲು ಪೂರೈಸುವ ರೈತರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸಲು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ. ಬ್ಯಾಂಕ್ ಸ್ಥಾಪನೆ ಸಂಬಂಧ ನ.25ಕ್ಕೆ ಆರ್ ಬಿಐ ಜೊತೆಗೆ ಸಭೆ ನಿಗದಿಯಾಗಿದ್ದು, ಇದಕ್ಕೆ ಚಾಲನೆ ಸಿಗುವ ವಿಶ್ವಾಸವಿದೆ. ನಬಾರ್ಡ್ ನಿಂದ ನೀಡುವ ಸಾಲದ ಹಣ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. 
ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿಲ್ಲ. ರೈತರು ಸರಿಯಾದ ಸಮಯಕ್ಕೆ ಸಾಲ  ಮರುಪಾವತಿ ಮಾಡುತ್ತಿದ್ದಾರೆ. 90% ಡಿಸಿಸಿ ಬ್ಯಾಂಕ್, ವಿಶೇಷವಾಗಿ ಸ್ವಸಹಾಯ ಗುಂಪುಗಳಿಂದ 100% ಸಾಲ ಮರುಪಾವತಿ ಆಗುತ್ತಿದೆ ಎಂದು ಹೇಳಿದರು.

ಮೊಳಹಳ್ಳಿಯವರು ಸಹಕಾರಿ ಕ್ಷೇತ್ರಕ್ಕೆ ಹಾಕಿರುವ ಭದ್ರ ಬುನಾದಿಯಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳು ಲಾಭದಲ್ಲಿದೆ: ಡಾ.ಎಂ.ಎನ್.ರಾಜೇಂದ್ರ ಕುಮಾರ್



ರಾಜ್ಯ ಸಹಕಾರ ಮಾರಾಟ ಮಂಡಳಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಅವಿಭಜಿತ ದ.ಕ.ಜಿಲ್ಲೆಯ ಐವರಿಗೆ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿರೋದು ಸಂತೋಷ ತಂದಿದೆ. ಮೊಳಹಳ್ಳಿ ಶಿವರಾಯರು ಸಹಕಾರಿ ಕ್ಷೇತ್ರವನ್ನು ಹುಟ್ಟು ಹಾಕಿದವರು. ಅವರು ಹಾಕಿರುವ ಭದ್ರ ಬುನಾದಿಯಿಂದ ನಮ್ಮ ಜಿಲ್ಲೆಯ ಎಲ್ಲಾ 170 ಪ್ರಾಥಮಿಕ ಸಹಕಾರಿ ಸಂಘಗಳು ಎಲ್ಲವೂ ಲಾಭದಲ್ಲಿದೆ. ಸ್ವಂತ ಕಟ್ಟಡವನ್ನು ಹೊಂದಿದೆ. ಸಹಕಾರಿ ಸಪ್ತಾಹವನ್ನು ಜಿಲ್ಲೆಯ ಎಲ್ಲರ ಸಹಕಾರದಿಂದ ಆಯೋಜನೆ ಮಾಡಿರುವುದರಿಂದ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ಎಲ್ಲರ ಕೈಜೋಡಿಸುವಿಕೆಯಿಂದ ಈ ಯಶಸ್ಸು ಸಾಧ್ಯವಾಗಿದೆ. ನನಗೆ ದೊರಕಿರುವ ಪ್ರಶಸ್ತಿ ಗೌರವಗಳಿಗೆ ಜಿಲ್ಲೆಯ ಎಲ್ಲಾ ಸಹಕಾರಿಗಳು ಕಾರಣ ಎಂದು ಹೇಳಿದರು.

ಕಾರ್ಯಕ್ರಮದ ಮೊದಲಿಗೆ ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ ಜಾಥಾ ನೆರವೇರಿತು.

Ads on article

Advertise in articles 1

advertising articles 2

Advertise under the article