Mangalore: ಇಂದಿನಿಂದ ಕಟೀಲು ಮೇಳದ ಕಾಲಮಿತಿ ಯಕ್ಷಗಾನ ಸೇವೆ ಆರಂಭ
Friday, November 25, 2022
ಮಂಗಳೂರು: ರಾತ್ರಿ ಪೂರ್ತಿ ಯಕ್ಷಗಾನ ಸೇವೆ ನಡೆಸುತ್ತಿದ್ದ ಹರಕೆ ಬಯಲಾಟ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಈ ಬಾರಿಯಿಂದ ಕಾಲಮಿತಿಗಿಳಿದಿದೆ. ಇಂದಿನಿಂದ ಆರೂ ಮೇಳಗಳು ಕಾಲಮಿತಿಯ ಯಕ್ಷಗಾನ ಸೇವೆ ನಡೆಸುತ್ತಿದೆ.
ಹಿಂದೆ ರಾತ್ರಿ 8.30ಕ್ಕೆ ಆಗುತ್ತಿದ್ದ ಚೌಕಿ ಪೂಜೆ ಇನ್ನುಮುಂದೆ ಸಂಜೆ 5.45ಕ್ಕೆ ನಡೆಯಲಿದೆ. ಪೂರ್ವರಂಗ ಪ್ರವೇಶ ಹಿಂದೆ ರಾತ್ರಿ 8.45ಕ್ಕೆ ಆಗುತ್ತಿತ್ತು ಇನ್ನುಮುಂದೆ ಸಂಜೆ 6ಕ್ಕೆ ನಡೆಯಲಿದೆ. 6-7 ರವರೆಗೆ ಪೂರ್ವರಂಗ ಪ್ರವೇಶ ನಡೆದು 7ಗಂಟೆಗೆ ಪ್ರಸಂಗ ಆರಂಭವಾಗಲಿದೆ. ಹಿಂದೆ ರಾತ್ರಿ 10.30 ರಿಂದ ಬೆಳಗ್ಗೆ 6ರವರೆಗೆ ಯಕ್ಷಗಾನ ಸೇವೆ ನಡೆಯುತ್ತಿತ್ತು. ಈ ಬಾರಿಯಿಂದ ಕಾಲಮಿತಿಯ ಅನ್ವಯ 7ರಿಂದ 12.30ರವರೆಗೆ ಯಕ್ಷಗಾನ ನಡೆಯಲಿದೆ.
ಕಾಲಮಿತಿಗೆ ಪ್ರಸಂಗವನ್ನು ಹೊಂದಾಣಿಸಬೇಕಾದ ಅನಿವಾರ್ಯತೆಯಿಂದ ಪೂರ್ವರಂಗದಲ್ಲಿ ಪೀಠಿಕಾ ಸ್ತ್ರೀವೇಷವನ್ನು ಕೈಬಿಡಲಾಗಿದೆ. ಅಲ್ಲದೆ ಕಟೀಲು ಮೇಳದಲ್ಲಿ ಅತೀ ಹೆಚ್ಚು ಪ್ರದರ್ಶನಗೊಳ್ಳುವ ಶ್ರೀ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಕೆಲವೊಂದು ಸನ್ನಿವೇಶವನ್ನು ಪ್ರಸಂಗಕ್ಕೆ ತೊಂದರೆಯಾಗದಂತೆ ಕೈಬಿಡಲಾಗಿದೆ.