Kozhikode: ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆ;ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿ ಅಂತಿಮ ಆದೇಶ ನೀಡಿದ ಕೋಜಿಕ್ಕೋಡ್ ಕೋರ್ಟ್
Friday, November 25, 2022
ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವರಾಹಂ ರೂಪಂ ಹಾಡು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ಕೋರ್ಟ್ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ.
ಕಾಂತಾರ ಸಿನಿಮಾ ದೇಶ ವಿದೇಶದಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ ಅಪಸ್ವರ ಎತ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಾವು ಮಾಡಿದ್ದ ನವರಸಂ ರೂಪಂ ಎನ್ನುವ ಆಲ್ಬಂ ಹಾಡಿನ ರೀತಿಯಲ್ಲೇ ವರಾಹಂ ರೂಪಂ ಹಾಡನ್ನು ಮಾಡಲಾಗಿದ್ದು ಅದರ ಟ್ಯೂನ್ ನಲ್ಲಿ ಬಳಸಿದ್ದ ತಾಂತ್ರಿಕ ಶೈಲಿ ತಮ್ಮ ಹಾಡನ್ನು ಹೋಲುತ್ತದೆ, ನಮ್ಮ ಹಾಡಿನ ಧಾಟಿಯಿಂದ ಪ್ರೇರಿತಗೊಂಡು ವರಾಹ ರೂಪಂ ಹಾಡು ರೂಪಿಸಲಾಗಿದೆ ಎಂದು ಕೋಜಿಕ್ಕೋಡ್ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಹಾಕಲಾಗಿತ್ತು. ನ್ಯಾಯಾಲಯ ಈ ಬಗ್ಗೆ ಪ್ರತಿವಾದಿಗಳ ಅಹವಾಲು ಕೇಳುವ ಮೊದಲೇ ಹಾಡಿನ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಇದರಿಂದ ಕಾಂತಾರ ಸಿನಿಮಾ ತಂಡಕ್ಕೆ ಮುಖಭಂಗ ಅನ್ನುವ ರೀತಿ ಕೇರಳ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಕೇರಳ ಹೈಕೋರ್ಟ್ ನೀಡಿದ್ದ ಆದೇಶದ ಕೆಲವೇ ದಿನದಲ್ಲಿ ಕೋಜಿಕ್ಕೋಡ್ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದ್ದು, ಕಾಂತಾರ ಸಿನಿಮಾ ತಂಡಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.