ಮಂಗಳೂರು: ಆಟೋದಲ್ಲಿ ಸ್ಫೋಟ ಪ್ರಕರಣದ ಸ್ಥಳಕ್ಕೆ ರಾಜ್ಯ ಗೃಹ ಸಚಿವ, ಡಿಜಿಪಿ ಭೇಟಿ ಪರಿಶೀಲನೆ
Tuesday, November 22, 2022
ಮಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಅವರು ಗರೋಡಿ ಬಳಿಯ ಆಟೋರಿಕ್ಷಾ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಅಲ್ಲಿಯೇ ಇರಿಸಲಾಗಿರುವ ಆಟೋರಿಕ್ಷಾವನ್ನು ವೀಕ್ಷಿಸಿ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.
ನ.19ರಂದು ಸಂಜೆ ಶಂಕಿತ ಭಯೋತ್ಪಾದಕ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನಲ್ಲಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ ಓಡಾಟ ನಡೆಸದಂತೆ ರಸ್ತೆಯಿಂದ ಪ್ರತ್ಯೇಕಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ.
ಬಳಿಕ ಆರಗ ಜ್ಞಾನೇಂದ್ರ ಹಾಗೂ ಪ್ರವೀಣ್ ಸೂದ್ ನಗರದ ಕಂಕನಾಡಿ ಆಸ್ಪತ್ರೆಗೆ ಭೇಟಿ ನೀಡಿ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಹಾಗೂ ಆರೋಪಿ ಶಾರೀಕ್ ಆರೋಗ್ಯ ವಿಚಾರಿಸಿದರು. ಈ ವೇಳೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಶಾಸಕ ಡಾ.ವೈ.ಭರತ್ ಶೆಟ್ಟಿ ಜೊತೆಗಿದ್ದರು.