ಮಂಗಳೂರು: ಸಿಎಂ ಬೊಮ್ಮಾಯಿಯವರಿಂದ ಟಾಗೋರ್ ಪಾರ್ಕ್ ನಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಅನಾವರಣ
Saturday, November 19, 2022
ಮಂಗಳೂರು: ಭಾರತದಲ್ಲಿ ಬ್ರಿಟಿಷರಿಗೆ ಮೊದಲ ಸೋಲಿನ ಭೀತಿ ಹುಟ್ಟಿಸಿದ, ಭಾರತದ ಜನಸಾಮಾನ್ಯರಿಗೆ ಬ್ರಿಟಿಷರ ವಿರುದ್ಧ ಪ್ರಥಮ ಜಯ ದೊರಕಿಸಿಕೊಟ್ಟ ಮಂಗಳೂರು ಕ್ರಾಂತಿಯ ರೂವಾರಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ನಗರದ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿಯವರು ಅನಾವರಣಗೊಳಿಸಿದರು.
ಯಾರು ಈ ಕೆದಂಬಾಡಿ ರಾಮಯ್ಯ?
ಜನಸಾಮಾನ್ಯರು ಹಾಗೂ ರೈತರ ಮೇಲೆ ಬ್ರಿಟಿಷರ ಕ್ರೌರ್ಯ ಹಾಗೂ ದಬ್ಬಾಳಿಕೆಯನ್ನು ಸಹಿಸದ ಕೆದಂಬಾಡಿ ರಾಮಯ್ಯ ಗೌಡರು 1837ರಲ್ಲಿ ಬ್ರಿಟಿಷರ ವಿರುದ್ಧ ರೈತ ಸೇನೆಯನ್ನು ಕಟ್ಟಿ, ಸ್ಮರಣೀಯ ಹೋರಾಟ ನಡೆಸಿದವರು. ಬೆಳ್ಳಾರೆಯಿಂದ ಸುಮಾರು 2000ದಷ್ಟು ಇದ್ದ ರೈತ ಸೇನೆಯು ಕೆದಂಬಾಡಿ ರಾಮಯ್ಯ ಗೌಡರ ಮನೆಯಿಂದ ಹೊರಟು ಮೊದಲಿಗೆ ಬೆಳ್ಳಾರೆಯಲ್ಲಿದ್ದ ಖಜಾನೆಯನ್ನು ವಶಪಡಿಸಿಕೊಂಡಿತು. ಹಾಗೆ ಬಂದ ರೈತ ದಂಡು ಸುಮಾರು 90 ಕಿ.ಮೀ.ದೂರದಲ್ಲಿರುವ ಮಂಗಳೂರು ಕಲೆಕ್ಟರ್ ಆಫೀಸನ್ನು ಮುತ್ತಿಗೆ ಹಾಕಿತು. ಬಳಿಕ ನಗರದ ಗುಡ್ಡದ ಮೇಲಿನ ಲೈಟ್ ಹೌಸ್ ನಲ್ಲಿ ವಿಜಯದ ಸಂಕೇತವಾದ ಬಾವುಟವನ್ನು ಹಾರಿಸಿದರು. ಮುಂದಕ್ಕೆ ಈ ಪ್ರದೇಶವು ಬಾವುಟಗುಡ್ಡವೆಂದೇ ಗುರುತಿಸಿಕೊಂಡಿತು.
ಈ ಮೂಲಕ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ 13 ದಿನಗಳ ಕಾಲ ಸ್ಥಾಪಿತ ಸರಕಾರವನ್ನು ಮುನ್ನಡೆಸಲಾಯಿತು. ಇದು ಭಾರತದ ನೆಲದಲ್ಲಿ ಬ್ರಿಟಿಷರಿಗೆ ಒದಗಿದ ಪ್ರಥಮ ಸೋಲು ಹಾಗೂ ಭಾರತದ ಸಾಮಾನ್ಯ ಜನರಿಗೆ ಬ್ರಿಟಿಷರ ವಿರುದ್ಧ ದೊರಕಿದ ಪ್ರಪ್ರಥಮ ಜಯ. ಈ ಹೋರಾಟದಲ್ಲಿ ಹುತಾತ್ಮರಾದ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಿಸಿ ಮಂಗಳೂರಿನ ಚಾರಿತ್ರಿಕ ಸ್ಥಳವಾದ ಬಾವುಟಗುಡ್ಡೆಯಲ್ಲಿ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ಅವರ ಹೆಸರನ್ನು ಈ ನಾಡಿನಲ್ಲಿ ಶಾಶ್ವತವಾಗಿ ಉಳಿಸುವ ಪ್ರಯತ್ನ ಮಾಡಲಾಗಿದೆ.
Video