ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ;ಆರೋಪಿ ಮನೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ,ಉಗ್ರರ ನಂಟಿನ ಕುರಿತು ತನಿಖೆ ಚುರುಕು, ನಾಲ್ವರ ಬಂಧನ
Monday, November 21, 2022
ಮಂಗಳೂರು: ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ಗರೋಡಿ ಬಳಿ ಶನಿವಾರ ಸಂಜೆ ನಡೆದ ಆಟೋದಲ್ಲಿ ಸ್ಫೋಟ ಪ್ರಕರಣದ ಆರೋಪಿ ತೀರ್ಥಹಳ್ಳಿ ಮೂಲದ ಶಾರೀಕ್ (24) ಎಂದು ಎಜಿಡಿಪಿ ಅಲೋಕ್ ಕುಮಾರ್ ದೃಢಪಡಿಸಿದ್ದಾರೆ. ಈತ ಕುಕ್ಕರ್ ಬಾಂಬ್ ಮೂಲಕ ಮಂಗಳೂರಿನಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿ ಶಾರೀಕ್ ಮಂಗಳೂರಿನ ಉಗ್ರಪರ ಗೋಡೆ ಬರಹ ಬರೆದಿರುವ ಪ್ರಕರಣ ಹಾಗೂ ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ಗೆ ತಯಾರಿ ನಡೆಸಿದ್ದ ಆರೋಪಿಯಾಗಿದ್ದ. ಗೋಡೆ ಬರಹ ಪ್ರಕರಣದಲ್ಲಿ ಆತ ಜಾಮೀನು ಪಡೆದಿದ್ದ. ಆರೋಪಿಯ ಬಳಿ ಆಧಾರ್ ಕಾರ್ಡೊಂದು ದೊರೆತಿತ್ತು. ಈ ಆಧಾರ್ ಕಾರ್ಡ್‌ನಲ್ಲಿರುವ ವ್ಯಕ್ತಿಯ ಹೆಸರು ಪ್ರೇಮರಾಜ್ ಹುಟಗಿ ಎಂದಿತ್ತು. ಅದರಲ್ಲಿದ್ದ ವಿಳಾಸ ಹುಬ್ಬಳ್ಳಿ ಮೂಲದ ವ್ಯಕ್ತಿಗೆ ಸಂಬಂಧಿಸಿತ್ತು. ಆದರೆ ಆತ ಆರು ತಿಂಗಳ ಹಿಂದೆ ಆಧಾರ್ ಕಾರ್ಡನ್ನು ಕಳದುಕೊಂಡಿದ್ದ ಎಂದು ತಿಳಿದು ಬಂದಿರುತ್ತದೆ. ಅವರ ಆಧಾರ್ ಕಾರ್ಡ್ ಅನ್ನು ಆರೋಪಿ ದುರುಪಯೋಗ ಪಡಿಸಿಕೊಂಡಿದ್ದಾನೆಂದು ಇದೀಗ ಬಹಿರಂಗಗೊಂಡಿದೆ.
ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್‌ನಿಂದ ಹಾಗೂ ಆರೋಪಿತನ ಕುಟುಂಬದವರು ಆರೋಪಿತನನ್ನು ಗುರುತಿಸಿರುವುದರಿಂದ ಆರೋಪಿಯನ್ನು ಶಾರೀಕ್(24) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಶಾರೀಕ್ 1ನೇ ಆರೋಪಿಯಾಗಿರುತ್ತಾನೆ. ಆದರೆ ಪ್ರಕರಣ ದಾಖಲಾದ ಬಳಿಕ ಆತ ತಲೆಮರೆಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಂಗಳೂರಿನಲ್ಲಿ ನ.19ರಂದು ಬ್ಲಾಸ್ಟ್ ಪ್ರಕರಣದ ದಿನ ಈತ ಮೈಸೂರಿನಿಂದ ಹೊರಟು ಹುಣಸೂರು, ಮಡಿಕೇರಿ, ಪುತ್ತೂರು, ಬಿ.ಸಿ.ರೋಡ್ ಮೂಲಕ ಮಂಗಳೂರು ಹೊರವಲಯದಲ್ಲಿ ಬಸ್ಸಿನಿಂದ ಇಳಿದಿದ್ದಾನೆ. ಬಳಿಕ ಆಟೋದಲ್ಲಿ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಈ ಕೃತ್ಯ ನಡೆದಿರುತ್ತದೆ. ಈತ ನ.10ರಂದು ಒಂದು ಬಾರಿ ಮಂಗಳೂರಿಗೆ ಬಂದು ಸುತ್ತಾಡಿ ಹೋಗಿದ್ದ ಎಂದು ತನಿಖೆಯಿಂದ ಬಯಲಾಗಿದೆ.
ಈ ಪ್ರಕರಣದಲ್ಲಿ ತನಿಖೆ ನಡೆಸಿ ದೊರೆತ ಮಾಹಿತಿ ಮೇರೆಗೆ ಮೈಸೂರಿನಲ್ಲಿ ಆರೋಪಿತನು ವಾಸವಿದ್ದ ಬಾಡಿಗೆ ಮನೆಯಿಂದ ಸಲ್ಫೆಕ್ಸ್ ಸಲ್ಫರ್ ಪೌಡರ್, ನಟ್ ಟೋಲ್ಟ್ ಗಳು, ಸರ್ಕ್ಯೂಟ್ ಗಳು, ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, 150 ಬಾಕ್ಸ್ ಮ್ಯಾಚ್ ಬಾಕ್ಸ್ ಗಳು, ಬ್ಯಾಟರಿ, ಮೈಕ್ಯಾನಿಕಲ್ ಟೈಮರ್, ಫೇಕ್ ಆಧಾರ್ ಕಾರ್ಡ್, ಅಲ್ಯೂಮಿನಿಯಂ ಫೈಲ್ ಸಿಮ್ ಕಾರ್ಡ್ ಗಳು, ಮೊಬೈಲ್‌ನ ಡಿಸ್‌ಪ್ಲೇಗಳು, ಸ್ಫೋಟಕಕ್ಕೆ ಬಳಸುವ ವಿವಿದ ಬಗೆಯ ಕೆಮಿಕಲ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನು ಗುಣಮುಖ ಬಳಿಕ ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು.
ಈ ವರೆಗೆ ನಡೆಸಿರುವ ತನಿಖೆಯಿಂದ, ಸ್ಫೋಟ ನಡೆದ ಸ್ಥಳದ ಪರಿಶೀಲನೆ ವೇಳೆ ದೊರಕಿರುವ ವಸ್ತುಗಳು ಹಾಗೂ ಈವರೆಗೆ ಸಂಗ್ರಹಿಸಿದ ಸಾಕ್ಷ್ಯಧಾರದ ಮೇಲೆ UAPA Act ಹಾಗೂ ಆಧಾರ್ ಕಾರ್ಡ್‌ನ್ನು ನಕಲಿ ಮಾಡಿದ ಕುರಿತು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಅಲ್ಲದೆ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಬ್ಬರು, ಮಂಗಳೂರಿನಲ್ಲಿ ಓರ್ವ ಹಾಗೂ ಊಟಿಯಲ್ಲಿ ಓರ್ವನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತದೆ.
ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ. ಬೇರೆ ಕಡೆ ಬ್ಲಾಸ್ಟ್ ಆಗಿದ್ದರೆ ದೊಡ್ಡ ಮಟ್ಟದ ಡ್ಯಾಮೇಜ್ ಆಗುತ್ತಿತ್ತು. ಬಹಳ ಜನರ ಜೀವ ರಕ್ಷಣೆ ಆಗಿದೆ. ದೇವರಿಗೆ ಧನ್ಯವಾದ ಹೇಳುತ್ತೇವೆ. ಶಾರೀಕ್ ಆರೋಗ್ಯ ಸ್ಥಿರವಾಗುತ್ತಿದ್ದು, ಆತನನ್ನು ಪ್ರಶ್ನೆ ಮಾಡುವ ಸ್ಟೇಜ್ ಗೆ ತರಬೇಕಾಗಿದೆ. ಇದಕ್ಕೆಕೆಲವು ದಿನ ಬೇಕಾಗುತ್ತದೆ. ಆತ ಬದುಕುವುದು ಬಹಳ ಪ್ರಮುಖ. ಸಣ್ಣ ಸೋಂಕು ಹರಡಿದರೂ ಜೀವಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.