ಕರಾವಳಿಯಲ್ಲಿ ಗೋಹತ್ಯೆ ಮಾಡಿದ್ರೆ ಖಾಸಗಿ ಜಾಗವೇ ಮುಟ್ಟುಗೋಲು...ತಿಂಗಳಅಂತರದಲ್ಲಿ ಮಂಗಳೂರಿನಲ್ಲಿ ನಾಲ್ಕು ಕಡೆ ಖಾಸಗಿ ಜಾಗ ಜಪ್ತಿ...ಕೇಸು ದಾಖಲಾದ ನಾಲ್ಕೇ ದಿನದಲ್ಲಿ ಖಾಸಗಿ ಜಾಗ ಜಪ್ತಿಗೆ ಆದೇಶ...ಬಿಜೆಪಿ ಶಾಸಕರ ಸೂಚನೆಯಂತೆ ಸೊತ್ತು ಜಪ್ತಿಗೈದ ಅಧಿಕಾರಿಗಳು...

ಕರಾವಳಿಯಲ್ಲಿ ಗೋಹತ್ಯೆ ಮಾಡಿದ್ರೆ ಖಾಸಗಿ ಜಾಗವೇ ಮುಟ್ಟುಗೋಲು...ತಿಂಗಳಅಂತರದಲ್ಲಿ ಮಂಗಳೂರಿನಲ್ಲಿ ನಾಲ್ಕು ಕಡೆ ಖಾಸಗಿ ಜಾಗ ಜಪ್ತಿ...ಕೇಸು ದಾಖಲಾದ ನಾಲ್ಕೇ ದಿನದಲ್ಲಿ ಖಾಸಗಿ ಜಾಗ ಜಪ್ತಿಗೆ ಆದೇಶ...ಬಿಜೆಪಿ ಶಾಸಕರ ಸೂಚನೆಯಂತೆ ಸೊತ್ತು ಜಪ್ತಿಗೈದ ಅಧಿಕಾರಿಗಳು...


  ಮಂಗಳೂರು: ಹಿಂದು ಸಂಘಟನೆಗಳ ಒತ್ತಾಯಕ್ಕೆ ಕಟ್ಟುಬಿದ್ದು ಎರಡು ವರ್ಷಗಳ ಹಿಂದೆ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ಬಂದಿತ್ತು. ಅದಾಗಿ ಎರಡು ವರ್ಷ ಆಗುತ್ತಾ ಬಂದರೂ, ಕಾನೂನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ ಚುನಾವಣೆ ಕಾಲದಲ್ಲಿ ಗೋಹತ್ಯೆ ಕಾನೂನು ಕರಾವಳಿಯಲ್ಲಿ ಗೋಹಂತಕರಿಗೆ ತೀವ್ರ ಬಿಸಿ ಮುಟ್ಟಿಸುವ ಹಂತಕ್ಕೆ ಹೋಗಿದೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.
 
ಹೌದು... ಕರಾವಳಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಗೋಹಂತಕರ ಪಾಲಿಗೆ ಗಧಾಪ್ರಹಾರ ಅನ್ನುವಂತೆ ಬೀಸತೊಡಗಿದೆ. ಗೋವನ್ನು ಅಕ್ರಮವಾಗಿ ಸಾಗಾಟ ಮಾಡಿ ಸಿಕ್ಕಿಬಿದ್ದರೂ, ಎಲ್ಲೋ ಕಸಾಯಿಖಾನೆ ನಡೆಸುತ್ತಿದ್ದೋರ ಜಾಗವೇ ಜಪ್ತಿಯಾಗುವಂತೆ ಕಾನೂನು ತಗ್ಲಾಕ್ಕೊಳ್ತಿದೆ. 2020ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಾಗ, ಇದರ ಬಿಸಿ ಇಷ್ಟು ತಟ್ಟುತ್ತೆ ಎಂದು ಯಾರೂ ಅಂದ್ಕೊಂಡಿರಲಿಲ್ಲ. ಎರಡು ವರ್ಷವೂ ತಣ್ಣಗಿದ್ದ ಕಾನೂನಿನ ಕುಣಿಕೆಯನ್ನು ಚುನಾವಣೆ ಕಾಲದಲ್ಲಿ ಬಿಜೆಪಿ ಸರಕಾರ ಪ್ರಯೋಗಿಸಲು ಮುಂದಾಗಿದೆ. ಒಂದೇ ತಿಂಗಳ ಅಂತರದಲ್ಲಿ ಮಂಗಳೂರು ನಗರದ ಆಸುಪಾಸಿನಲ್ಲಿ ನಾಲ್ಕು ಕಡೆ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದ ಜಾಗವನ್ನು ಜಪ್ತಿ ಮಾಡಲಾಗಿದೆ.

ಮೊನ್ನೆ ಅಕ್ಟೋಬರ್ 29ರಂದು ಅಕ್ರಮ ಗೋಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ್ದ ಮಂಗಳೂರಿನ ಕಂಕನಾಡಿ ನಗರ ಠಾಣೆ ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ, ಅದ್ಯಪಾಡಿಯಲ್ಲಿ ಅಕ್ರಮ ಕಸಾಯಿಖಾನೆ ಮಾಡುತ್ತಿರುವುದನ್ನು ತಿಳಿಸಿದ್ದರು. ಈ ಬಗ್ಗೆ ಪೊಲೀಸರು ಮಂಗಳೂರಿನ ಮೂರನೇ ಸಿಜೆಎಂ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನೂ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಆಸ್ತಿ ಮುಟ್ಟುಗೋಲು ಕ್ರಮಕ್ಕೆ ಸೂಚನೆ ನೀಡಿದ್ದು ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ.
ಮಂಗಳೂರು ವಿಭಾಗ ಆಯುಕ್ತ ಮದನಮೋಹನ್ ಅದ್ಯಪಾಡಿಯಲ್ಲಿ ಕಸಾಯಿಖಾನೆ ನಡೆಸುತ್ತಿದ್ದ ಯಾಕೂಬ್ ಎಂಬವರಿಗೆ ಸೇರಿದ 15 ಸೆಂಟ್ಸ್ ಜಾಗ ಮತ್ತು ಅಲ್ಲಿನ ಕಟ್ಟಡವನ್ನು ಜಪ್ತಿ ಮಾಡುವಂತೆ ನಗರ ಠಾಣೆ ಪೊಲೀಸರಿಗೆ ಆದೇಶ ಮಾಡಿದ್ದಾರೆ. ಅಲ್ಲದೆ, ಕಟ್ಟಡ ಮತ್ತು ಜಾಗದ ಅಂದಾಜು ಮೌಲ್ಯಮಾಪನ ಮಾಡಿ ಕಂದಾಯ ಇಲಾಖೆಯ ವಶಕ್ಕೆ ಒಪ್ಪಿಸುವಂತೆ ಸೂಚಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯಡಿ ಗೋವನ್ನು ಹತ್ಯೆ ಮಾಡುವ ಜಾಗವನ್ನು ಜಪ್ತಿ ಮಾಡಲು ಅವಕಾಶವಿದ್ದು, ಅದರಂತೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ವೇದವ್ಯಾಸ ಕಾಮತ್, ಅಕ್ರಮ ಗೋಹತ್ಯೆ ಮಾಡುವರಿಗೆ ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ. ಈ ಮೂಲಕ ಗೋಹಂತಕರಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದಿದ್ದಾರೆ.

ಕರಾವಳಿ ಮಟ್ಟಿಗೆ ಹಿಂದುತ್ವ, ಗೋಹತ್ಯೆ ವಿಚಾರದಲ್ಲಿ ಮತ ಕ್ರೋಡೀಕರಣ ಮಾಡುವ ಬಿಜೆಪಿಗೆ ಗೋಹತ್ಯೆ ಕಾನೂನು ದಾಳವಾಗಿ ಪರಿಣಮಿಸಿದ್ದು, ಒಂದೆಡೆ ಗೋಹಂತಕರನ್ನು ಕಾನೂನು ಕುಣಿಕೆಯಲ್ಲಿ ಸಿಕ್ಕಿಸುತ್ತಿದ್ದರೆ ಇನ್ನೊಂದೆಡೆ ಕೋಮು ಧ್ರುವೀಕರಣಕ್ಕೂ ಬಳಕೆಯಾಗುವಂತಾಗಿದೆ.

Ads on article

Advertise in articles 1

advertising articles 2

Advertise under the article