ಮಂಗಳೂರು: ಆಟೋರಿಕ್ಷಾ ಬ್ಲಾಸ್ಟ್ ಆರೋಪಿಯ ಗುರುತು ಪತ್ತೆಯಾಗಿಲ್ಲ ಎಜಿಡಿಪಿ ಅಲೋಕ್ ಕುಮಾರ್
Sunday, November 20, 2022
ಮಂಗಳೂರು: ನಗರದ ಕಂಕನಾಡಿಯ ಗರೋಡಿ ಬಳಿಯಲ್ಲಿ ನಿನ್ನೆ ಆಟೋರಿಕ್ಷಾದಲ್ಲಿ ಬ್ಲಾಸ್ಟ್ ಆಗಿರುವ ಸ್ಥಳಕ್ಕೆ ಆಗಮಿಸಿದ ಎಜಿಡಿಪಿ ಅಲೋಕ್ ಕುಮಾರ್ ಅವರು ಘಟನೆ ನಡೆದಿರುವ ಸ್ಥಳ ಹಾಗೂ ಆಟೋರಿಕ್ಷಾವನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಎಜಿಡಿಪಿ ಅಲೋಕ್ ಕುಮಾರ್ ಅವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್., ಡಿಸಿಪಿಗಳಾದ ಅನ್ಶು ಕುಮಾರ್, ದಿನೇಶ್ ಕುಮಾರ್, ದ.ಕ.ಜಿಲ್ಲಾ ಎಸ್ಪಿ ಋಷಿಕೇಶ ಸೋನಾವಾಣೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಪ್ರತ್ಯಕ್ಷದರ್ಶಿಗಳಿಂದ, ಸಮೀಪದ ಅಂಗಡಿಗಳವರಿಂದ ಮಾಹಿತಿ ಪಡೆದರು. ಬಳಿಕ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಶಂಕಿತ ಆರೋಪಿ, ಆಟೋ ಡ್ರೈವರ್ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅಲೋಕ್ ಕುಮಾರ್, ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಆಟೋ ಡ್ರೈವರ್ ಹಾಗೂ ಶಂಕಿತ ಭಯೊತ್ಪಾದಕನನ್ನು ಭೇಟಿ ನೀಡಿ ಮಾಹಿತಿ ಪಡೆದೆ. ಆಟೋ ಡ್ರೈವರ್ ನಾವು ಕೇಳಿದ್ದಕ್ಕೆ ಉತ್ತರ ನೀಡಿದ್ದಾರೆ. ಆದರೆ ಶಂಕಿತ ಭಯೋತ್ಪಾದಕ 45% ದೇಹಭಾಗ ಸುಟ್ಟಿದೆ. ಅಲ್ಲದೆ ಆತನ ಮುಖ ಊದಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ. ಗೋಡೆ ಬರಹದ ಆರೋಪಿ ಶಾರೀಕ್ ಈತನೇ ಹೌದೇ ಎಂಬ ತನಿಖೆಗೆ ಆತನ ಕುಟುಂಬಸ್ಥರನ್ನು ಕರೆಸಲಾಗುತ್ತದೆ. ಆ ಬಳಿಕ ಅವನ ಗುರುತು ಪತ್ತೆಯಾಗಲಿದೆ. ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಪರಮೇಶ್ವರ ಹೆಗ್ಡೆಯವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.