ಪಿಲಿಕುಳ ಉದ್ಯಾನವನದಲ್ಲಿ ಅಸುನೀಗಿದ ಹುಲಿಮರಿ
Sunday, November 13, 2022
ಮಂಗಳೂರು: ಹುಲಿಗಳ ನಡುವೆ ನಡೆದಿರುವ ಕಚ್ಚಾಟದಲ್ಲಿ ಗಾಯಗೊಂಡಿದ್ದ ಪಿಲಿಕುಳ ಜೈವಿಕ ಉದ್ಯಾನವನದ ಸುಮಾರು ಎರಡೂವರೆ ವರ್ಷ ಪ್ರಾಯದ ಹುಲಿಮರಿಯೊಂದು ಮೃತಪಟ್ಟಿದೆ. ಈ ಮೂಲಕ ಪಿಲಿಕುಳದಲ್ಲಿ 12 ಇದ್ದ ಹುಲಿಗಳ ಸಂಖ್ಯೆ 11ಕ್ಕೆ ಇಳಿದಿದೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲೇ ಜನಿಸಿದ್ದ ಈ ಹುಲಿಮರಿಯು ಕೆಲ ಸಮಯಗಳ ಹಿಂದೆ ಹುಲಿಗಳ ನಡುವೆಯೇ ನಡೆದಿರುವ ಕಚ್ಚಾಟದಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ಆದ್ದರಿಂದ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ.ವಿಷ್ಣು ದತ್ , ಡಾ.ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ಮೂಲಕ ಹುಲಿಮರಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿತ್ತು. ಆದರೆ ಕಳೆದ ಶುಕ್ರವಾರ ಮಧ್ಯಾಹ್ನ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ವೇಳೆ ವೈದ್ಯಾಧಿಕಾರಿಗಳು ಅದಕ್ಕೆ ತಕ್ಷಣದ ಶುಶ್ರೂಷೆ ನಡೆಸಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಹುಲಿಮರಿ ಅಸುನೀಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಅಸುನೀಗಿದ ಹುಲಿಯ ಅಂಗಾಂಗಗಳ ಮಾದರಿಯನ್ನು ಉತ್ತರ ಪ್ರದೇಶದ ಐ.ವಿ.ಆರ್.ಐ., ಬರೇಲಿ ಮತ್ತು ಬೆಂಗಳೂರಿನ ಐ.ಎ.ಎಚ್. ಆ್ಯಂಡ್ ವಿ.ಬಿ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹುಲಿಯ ಮರಣೋತ್ತರ ಪರೀಕ್ಷೆಯಲ್ಲಿ ಕಿಡ್ನಿ ಹಾಗೂ ಅಂಗಾಂಗಳ ವೈಫಲ್ಯ ಕಂಡು ಬಂದಿದೆ.